ಶಿವಮೊಗ್ಗ: ನಗರದ ಹೊರ ವಲಯ ಸೋಗಾನೆಯಲ್ಲಿನ ಕೇಂದ್ರ ಕಾರಾಗೃಹದ ಒಳಗೆ ಪ್ಯಾಕೇಟ್ ಮಾಡಿ ಗಾಂಜಾ ಎಸೆಯುತ್ತಿದ್ದ ಮೂವರನ್ನು ತುಂಗಾನಗರ ಪೊಲೀಸರು ಬಂಧಿಸಿದ್ದಾರೆ. ಅಜರುದ್ದೀನ್ (24), ಮಹಮ್ಮದ್ ಫೈಸಲ್(20) ಹಾಗೂ ರೋಷನ್ ಜಮೀರ್ (19) ಬಂಧಿತ ಆರೋಪಿಗಳು.
ಜೈಲಿನ ಒಳಗೆ ಹೊರಗಡೆಯಿಂದ ಗಾಂಜಾ ಪ್ಯಾಕೇಟ್ಗಳನ್ನು ಮಾಡಿ ಗಾಂಜಾ ಎಸೆಯುತ್ತಾರೆ. ಇದರಿಂದ ಜೈಲಿನ ಒಳಗೂ ಸಹ ಸುಲಭವಾಗಿ ಗಾಂಜಾ ಸಿಗುತ್ತದೆ, ಇದರಿಂದ ಜೈಲಿನಲ್ಲಿ ಗಲಾಟೆಗಳು ನಡೆಯುತ್ತವೆ ಎಂಬ ಆರೋಪವಿತ್ತು. ಇಂದು ತುಂಗಾನಗರ ಪೊಲೀಸರು ತಮಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ಕೇಂದ್ರ ಕಾರಾಗೃಹದ ಪಶ್ಚಿಮ ದಿಕ್ಕಿನ ಕಾಂಪೌಂಡ್ ಹಿಂಭಾಗ ಕಾಯುತ್ತಿರುವಾಗ, ಕಪ್ಪು ಬಣ್ಣದ ಪ್ಲಾಸ್ಟಿಕ್ ಗಮ್ ಟೇಪ್ ಸುತ್ತಿ ಗಾಂಜಾವನ್ನು ಎಸೆಯಲು ಮುಂದಾದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ 9 ಸಾವಿರ ರೂ ಮೌಲ್ಯದ 240 ಗ್ರಾಂ ತೂಕದ ಗಾಂಜಾವನ್ನು, ಒಂದು ಮೊಬೈಲ್ ಹಾಗೂ ಒಂದು ಬೈಕ್ ಅನ್ನು ವಶಕ್ಕೆ ಪಡೆದು ಕೊಂಡಿದ್ದಾರೆ. ಇವರ ವಿರುದ್ಧ ಕಲಂ 20 (b) ಎಸ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.