ಶಿವಮೊಗ್ಗ: ತುಂಗಾ ನದಿಯ ನೀರನ್ನು ಕುಡಿಯುವುದಿರಲಿ ಮುಟ್ಟಲೂ ಕೂಡ ಭಯಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂಬುದು ಪರಿಸರವಾದಿಗಳ ಆತಂಕವಾಗಿದೆ.
ದಟ್ಟ ಕಾನನದ ನಡುವೆ ಹರಿದು ಬರುವ ತುಂಗಾ ನದಿ ಶಿವಮೊಗ್ಗ ನಗರವನ್ನು ಪ್ರವೇಶಿಸುವವರೆಗೂ ಶುದ್ಧವಾಗಿಯೇ ಇರುತ್ತದೆ. ಇದೇ ಕಾರಣಕ್ಕೆ ಶಿವಮೊಗ್ಗದ ಹೊರವಲಯದ ಗಾಜನೂರಿನಲ್ಲಿ ತುಂಗಾ ಜಲಾಶಯ ನಿರ್ಮಾಣ ಮಾಡಿ ಶಿವಮೊಗ್ಗ ನಗರಕ್ಕೆ ತುಂಗೆಯ ನೀರನ್ನೇ ಕುಡಿಯಲು ಸರಬರಾಜು ಮಾಡಲಾಗುತ್ತಿದೆ.
ಆದರೆ ತುಂಗಾ ನದಿ ಶಿವಮೊಗ್ಗ ನಗರ ಪ್ರವೇಶಿಸುತ್ತಿದ್ದಂತೆ ಚರಂಡಿಯಂತೆ ಪರಿವರ್ತನೆಯಾಗುತ್ತಿದೆ. ನಗರದಲ್ಲಿ ಬಳಸಿದ ಕೊಳಚೆ ನೀರನ್ನು ನೇರವಾಗಿ ತುಂಗಾ ನದಿಗೆ ಹರಿಯಬಿಡಲಾಗುತ್ತಿದೆ. ಈ ಕಾರಣದಿಂದ ಇಡೀ ನದಿ ಕೊಳಚೆ ನೀರಿನಿಂದ ಆವೃತವಾಗುತ್ತದೆ. ಜತೆಗೆ ಶಿವಮೊಗ್ಗದಿಂದ ಮುಂದೆ ಪವಿತ್ರ ತುಂಗಾ ನದಿ ದುರ್ನಾತ ಬೀರುತ್ತಾ ಹರಿಯುತ್ತಿದೆ.
ಶುದ್ಧ ಕುಡಿಯುವ ನೀರನ್ನು ತುಂಗಾ ಜಲಾಶಯದಿಂದ ಶಿವಮೊಗ್ಗ ನಗರದ ಜನರಿಗೆ ನೀಡುವ ಶಿವಮೊಗ್ಗ ಮಹಾನಗರ ಪಾಲಿಕೆ, ಬಳಿಕ ಶಿವಮೊಗ್ಗದಲ್ಲಿ ಬಳಸಿದ ಕೊಳಚೆ ನೀರನ್ನು ನೇರವಾಗಿ ತುಂಗಾ ನದಿಗೆ ಬಿಡುವ ಮೂಲಕ ಇಡೀ ನದಿಯನ್ನು ಮಲಿನಗೊಳಿಸುತ್ತಿದೆ ರನ್ನು ಆರೋಪವಿದೆ. ವೇಸ್ಟ್ ವಾಟರ್ ಟ್ರೀಟ್ಮೆಂಟ್ ಪ್ಲಾಂಟ್ ಮಾಡಿ ಕೊಳಚೆ ನೀರನ್ನು ಶುದ್ಧಗೊಳಿಸಿ ಬಳಿಕ ಶುದ್ಧ ನೀರನ್ನು ತುಂಗಾ ನದಿಗೆ ಬಿಡಬೇಕಾಗಿತ್ತು. ಆದರೆ 10 ವರ್ಷಗಳೇ ಕಳೆದರೂ ಕೂಡ ವೇಸ್ಟ್ ವಾಟರ್ ಟ್ರೀಟ್ಮೆಂಟ್ ಪ್ಲಾಂಟ್ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಹೀಗಾಗಿ ತುಂಗಾ ನದಿ ಕೊಳಚೆ ನೀರಿನಿಂದ ಆವೃತವಾಗಿದೆ.
ಇದನ್ನೂ ಓದಿ: ಇನ್ನೊಂದು ತಿಂಗಳು ಪ್ರತಿಭಟನೆ ಮಾಡಿದರೂ ಬಗ್ಗಲ್ಲ, ಮುಷ್ಕರನಿರತರಿಗೆ ವೇತನ ನೀಡಲ್ಲ; ಸಿಎಂ
ತುಂಗಾ ನದಿಗೆ ಕೊಳಚೆ ನೀರನ್ನು ನೇರವಾಗಿ ಬಿಡುವುದನ್ನು ಕೂಡಲೇ ನಿಲ್ಲಿಸಬೇಕು. ವೇಸ್ಟ್ ವಾಟರ್ ಟ್ರೀಟ್ಮೆಂಟ್ ಪ್ಲಾಂಟ್ಗಳನ್ನು ಕೂಡಲೇ ನಿರ್ಮಾಣ ಮಾಡಿ ಕೊಳಚೆ ನೀರನ್ನು ಶುದ್ಧಗೊಳಿಸಿ ಬಳಿಕ ತುಂಗಾ ನದಿಗೆ ಬಿಡುವ ಮೂಲಕ ತುಂಗೆಯ ಪಾವಿತ್ರ್ಯತೆ ಕಾಪಾಡಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.