ಶಿವಮೊಗ್ಗ: ಬಡವರ ಹೊಟ್ಟೆ ಸೇರಬೇಕಿದ್ದ ನ್ಯಾಯಬೆಲೆ ಅಂಗಡಿಯ ಅಕ್ಕಿಯನ್ನು ನ್ಯಾಯಬೆಲೆ ಅಂಗಡಿಯವನೇ ಮಾರಾಟ ಮಾಡುವಾಗ ಸ್ಥಳೀಯರೇ ಹಿಡಿದಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ನಗರದ ಹೊರವಲಯ ಬೊಮ್ಮನಕಟ್ಟೆ ಆಶ್ರಯ ಬಡಾವಣೆಯ ದ್ಯಾಮಲಾಂಬ ನ್ಯಾಯಬೆಲೆ ಅಂಗಡಿಯಲ್ಲಿ ಬಡವರಿಗೆ ಸೇರಬೇಕಾಗಿದ್ದ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿ ಕಳುಹಿಸಲಾಗುತ್ತಿತ್ತು. ಈ ವೇಳೆ ಸ್ಥಳೀಯರೆ ಅಕ್ಕಿ ಸಾಗಾಟವನ್ನು ತಡೆ ಹಿಡಿದಿದ್ದಾರೆ.
ಸುಮಾರು ಎರಡೂವರೆ ಕ್ವಿಂಟಾಲ್ ಅಕ್ಕಿಯನ್ನು ಆಟೋದಲ್ಲಿ ಸಾಗಿಸಲಾಗುತ್ತಿತ್ತು. ಈ ವೇಳೆ ಸ್ಥಳೀಯರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಸ್ಥಳಕ್ಕೆ ಕಾರ್ಪೋರೇಟರ್ ವಿಶ್ವಾಸ್ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸುಂದರೇಶ್ ಭೇಟಿ ನೀಡಿದ್ದಾರೆ.
ಸ್ಥಳೀಯ ನಿವಾಸಿಗಳು ತಕ್ಷಣ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಶಿವಮೊಗ್ಗ ತಾಲೂಕು ಆಹಾರ ಇಲಾಖೆ ಉಪ ನಿರ್ದೇಶಕರಾದ ರಮ್ಯ, ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದಾರೆ.