ಶಿವಮೊಗ್ಗ: ಲೆಕ್ಕವೇ ಸಿಗದ ಅಸಂಘಟಿತ ಕಾರ್ಮಿಕರ ನೆರವಿಗೆ ಸರ್ಕಾರ ಹೆಚ್ಚುವರಿ ಪ್ಯಾಕೇಜ್ ಘೋಷಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು 1,610 ಕೋಟಿ ರೂಗಳ ಪ್ಯಾಕೇಜನ್ನು ಘೋಷಿಸುವ ಮೂಲಕ ಕಾರ್ಮಿಕರು, ರೈತರ ನೆರವಿಗೆ ಧಾವಿಸಿರುವುದು ಸ್ವಾಗತಾರ್ಹ ವಿಷಯ. ಆದರೆ ಇದರಲ್ಲಿ ಅನೇಕ ಸಣ್ಣಪುಟ್ಟ ಬಡಕುಟುಂಬಗಳು ಲೆಕ್ಕಕ್ಕೆ ಸಿಗದ ಅಸಂಘಟಿತ ಕಾರ್ಮಿಕರು ಸೇರದೆ ಇರುವುದರಿಂದ ಸರ್ಕಾರ ತಕ್ಷಣವೇ ಈ ವರ್ಗಗಳನ್ನು ಗುರುತಿಸುವ ಮೂಲಕ ಅವರಿಗೆ ನೆರವಿನ ಹಸ್ತ ಚಾಚಬೇಕು ಎಂದು ತಿಳಿಸಿದರು.
ಟೈಲರ್ಗಳು, ಹಮಾಲರು, ಚಿನ್ನ ಬೆಳ್ಳಿ ಕೆಲಸ ಮಾಡುವನರು, ನೋಂದಾಯಿತರಲ್ಲದ ಕ್ಷೌರಿಕರು, ಕುಂಬಾರರು ಹೀಗೆ ದುಡಿಮೆಯನ್ನೇ ನಂಬಿಕೊಂಡು ಈಗ ಕೆಲಸ ಕಳೆದುಕೊಂಡ ಅನೇಕ ಅಸಂಘಟಿತರಿಗೆ ಸರ್ಕಾರ ನೆರವು ಅವಶ್ಯವಾಗಿ ಬೇಕಿದೆ ಎಂದರು.
ಎಪಿಎಂಸಿಯಲ್ಲಿ ನೋಂದಾಯಿತರಲ್ಲದ ಹಮಾಲರು, ತೂಕ ಮಾಡುವರು, ದಿನಗೂಲಿ ಕೆಲಸ ಮಾಡುವವರಿದ್ದಾರೆ. ಇವರೆಲ್ಲರಿಗೂ ಆಯಾ ಎಪಿಎಂಸಿಗಳೇ ಹಣದ ನೆರವು ನೀಡುವಂತೆ ಸರ್ಕಾರ ನಿರ್ದೇಶನ ನೀಡಬೇಕು. ಅಲ್ಲದೆ ಸಂಬಂಧಪಟ್ಟ ಸಚಿವರು ಈ ಬಗ್ಗೆ ಗಮನ ಹರಿಸಬೇಕು.
ವಲಸೆಬಂದ ಕಾರ್ಮಿಕರು ಈಗಾಗಲೇ ತಮ್ಮ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಸುಮಾರು 80 ಲಕ್ಷ ಜನರು ಮೂಲ ಸ್ಥಳಗಳಿಗೆ ಹೋಗಿದ್ದಾರೆ. ಆದರೂ ಸರ್ಕಾರದಿಂದ ನೀಡುತ್ತಿರುವ ಕಿಟ್ಗಳು ಮಾತ್ರ ಅಷ್ಟೇ ಪ್ರಮಾಣದಲ್ಲಿ ಖರ್ಚಾಗುತ್ತಿದೆ. ಹೀಗಾಗಿ ಇದರ ದುರುಪಯೋಗವಾಗುತ್ತಿದೆ ಎಂಬ ಸಂಶಯ ಬಂದಿದೆ. ಈ ನಿಟ್ಟಿನಲ್ಲಿ ಸರ್ಕಾರ ಎಚ್ಚೆತ್ತುಕೊಂಡು ಬಿಗಿ ಕ್ರಮ ತೆಗೆದುಕೊಳ್ಳಬೇಕು ಜೊತೆಗೆ ಸರ್ಕಾರ ನೀಡಿರುವ ಪ್ಯಾಕೇಜುಗಳ ಸೌಲಭ್ಯ ನಿಜವಾದ ಫಲಾನುಭವಿಗಳಿಗೆ ತಲುಪುವಂತೆ ನೋಡಿಕೊಳ್ಳಬೇಕು ಎಂದು ಆಯನೂರು ಮಂಜುನಾಥ್ ಮನವಿ ಮಾಡಿದ್ದಾರೆ.