ಶಿವಮೊಗ್ಗ : ಕೊರೊನಾ ವೈರಸ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿರುವವರ ಮೇಲೆ ಕೇಸ್ ದಾಖಲಿಸಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತ ಎಸ್ ವಟಾರೆ ಎಚ್ಚರಿಕೆ ನೀಡಿದ್ದಾರೆ.
ಕೊರೊನಾ ಸೋಂಕಿನಿಂದ ಮೃತರಾದ ವ್ಯಕ್ತಿಗಳ ಮೃತದೇಹಗಳನ್ನು ಗೌರವಯುತವಾಗಿ ಅಂತ್ಯಸಂಸ್ಕಾರ ನಡೆಸಲು ಸರ್ಕಾರ ಆದೇಶ ಹೊರಡಿಸಿದೆ. ಆದಾಗ್ಯೂ, ಮೃತ ದೇಹಗಳ ಶವಸಂಸ್ಕಾರ ನಡೆಸಲು ಕೆಲವು ಭಾಗಗಳಲ್ಲಿ ಅಲ್ಲಿನ ಸಾರ್ವಜನಿಕರು ಅಡಚಣೆ ಉಂಟು ಮಾಡುತ್ತಿರುವುದಲ್ಲದೆ ಅಸಹಕಾರ ತೋರುತ್ತಿದ್ದಾರೆ.
ಸಾಮಾಜಿಕ ಜಾಲತಾಣಗಳ ಮುಖಾಂತರ ಕಾನೂನಿಗೆ ವಿರುದ್ಧವಾಗಿ ಸುಳ್ಳು ಸುದ್ದಿ ಹಬ್ಬಿಸುವ ಚಟುವಟಿಕೆಯಲ್ಲಿ ತೊಡಗಿರುವುದನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ ಹಾಗೂ ಅಂತಹ ವ್ಯಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲು ಕಾನೂನಿನಡಿ ಅವಕಾಶವಿದೆ ಎಂದು ಮಹಾನಗರ ಪಾಲಿಕೆ ಆಯುಕ್ತರು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.
ಈಗಾಗಲೇ ಜುಲೈ11ರಂದು ಶಿವಮೊಗ್ಗ ನಗರ ವ್ಯಾಪ್ತಿಯ ರಾಜೀವ್ ಗಾಂಧಿ ಬಡಾವಣೆಯಲ್ಲಿರುವ ಪಾಲಿಕೆಯ ಚಿತಾಗಾರದ ಬಳಿ ಕೊರೊನಾ ಪೀಡಿತನ ಮೃತದೇಹದ ಅಂತ್ಯ ಸಂಸ್ಕಾರಕ್ಕೆಂದು ತೆರಳಿದಾಗ, ಕೆಲವು ಸಾರ್ವಜನಿಕರು ಉದ್ದೇಶಪೂರ್ವಕವಾಗಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆ, ಕೋಟೆ ಪೊಲೀಸ್ ಠಾಣೆಯಲ್ಲಿ ಅಂತಹ ವ್ಯಕ್ತಿಗಳ ವಿರುದ್ಧ ಐಪಿಸಿ ಸೆಕ್ಷನ್ 143, 341, 353, 269,270 ಮತ್ತು 149ರ ಅಡಿ ಪ್ರಕರಣ ದಾಖಲಿಸಿ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಇದೇ ವೇಳೆ ಹೇಳಿದರು.