ಶಿವಮೊಗ್ಗ: ದಲಿತ ಸಹೋದರಿಯರ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಕೇಂದ್ರ ಸಚಿವ ಎ ನಾರಾಯಣ ಸ್ವಾಮಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರಪ್ರದೇಶದ ಪ್ರಕರಣವಷ್ಟೇ ಅಲ್ಲದೆ, ದೇಶದ ಯಾವುದೇ ರಾಜ್ಯದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆದರೆ ವಿರುದ್ಧ ಬಿಜೆಪಿ ಸರ್ಕಾರ ಧ್ವನಿ ಎತ್ತುತ್ತದೆ ಎಂದು ಹೇಳಿದರು.
ಇಂತಹ ಪ್ರಕರಣಗಳಲ್ಲಿ ಉದಾಸೀನ ಮಾಡುವುದಿಲ್ಲ. ಇಂತಹ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸ್ಥಳೀಯವಾಗಿ ಕ್ರಮ ಜರುಗಿಸಲಾಗುವುದು ಮತ್ತು ಹೆಣ್ಣು ಮಕ್ಕಳ ರಕ್ಷಣೆಗೆ ನಮ್ಮ ಸರ್ಕಾರ ಬದ್ದವಾಗಿದೆ ಎಂದು ಹೇಳಿದರು.
ಇನ್ನು ನಾನು ಕೇಂದ್ರದ ಮಂತ್ರಿಯಾದ ಮೇಲೆ ನ್ಯಾಷನಲ್ ಎಸ್ಟಿ ಕಾರ್ಪೋರೇಷನ್ ವತಿಯಿಂದ ನೀಡಲಾಗುವ ಹಣದ ಮೇಲಿನ ಬಡ್ಡಿದರವನ್ನು ಶೇ 6 ರಿಂದ 3ಕ್ಕೆ ಇಳಿಸಿದ್ದೇನೆ. ಎಸ್ಸಿ ಸಮುದಾಯದ ಸುಮಾರು 3000 ಯುವಕರಿಗೆ ಐಎಎಸ್ ಹಾಗೂ ಐಪಿಎಸ್ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.
ಇನ್ನು ಒಳಮೀಸಲಾತಿ ಜಾರಿ ಕುರಿತು ಪ್ರತಿಕ್ರಿಯಿಸಿದ ಅವರು, ದೇಶದಲ್ಲಿ ಕೇವಲ ಐದಾರು ರಾಜ್ಯಗಳಲ್ಲಿ ಬಿಟ್ಟರೆ, ಉಳಿದ ಎಲ್ಲ ರಾಜ್ಯಗಳಲ್ಲಿ ಒಳಮೀಸಲಾತಿಯ ಕುರಿತು ವಿರೋಧವಿದೆ. ಇದಕ್ಕಾಗಿಯೇ ಸುಪ್ರೀಂ ಕೋರ್ಟ್ ತೀರ್ಪು ಬಂದ ನಂತರ ಒಳಮೀಸಲಾತಿಯನ್ಜು ಜಾರಿ ಮಾಡಲಾಗುವುದು ಎಂದು ಹೇಳಿದರು.
ಇದನ್ನೂ ಓದಿ : ವಿಮ್ಸ್ ಆಸ್ಪತ್ರೆ ದುರಂತ: ಸರ್ಕಾರಿ ಪ್ರಾಯೋಜಿತ ಕೊಲೆ ಎಂಬ ಸಿದ್ದರಾಮಯ್ಯ ಹೇಳಿಕೆ ನೋವುಂಟು ಮಾಡಿದೆ.. ಸುಧಾಕರ್