ಶಿವಮೊಗ್ಗ: ಜೆಡಿಎಸ್ ಮುಖವಾಡ ಕಳಚಿದರೆ ಮೋದಿ ಮುಖ ಕಾಣುತ್ತದೆ ಎಂಬ ಸುರ್ಜೆವಾಲ ಅವರ ಹೇಳಿಕೆಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಶಿವಮೊಗ್ಗದಲ್ಲಿ ತಿರುಗೇಟು ನೀಡಿದ್ದಾರೆ. ಗ್ರಾಮಾಂತರ ಕ್ಷೇತ್ರ ಅರಬಿಳಚಿ ಗ್ರಾಮದಲ್ಲಿ ಜೆಡಿಎಸ್ ಪಂಚರತ್ನ ರಥಯಾತ್ರೆಯಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಮುಖವಾಡ ಕಳಚಿದರೆ ಮೋದಿ ಮುಖ ಕಾಣುತ್ತದೆ ಎಂದು ಹೇಳಿದ ಸುರ್ಜೆವಾಲಗೆ ನಾಚಿಕೆ ಆಗಬೇಕು. ಜೆಡಿಎಸ್ ಅವಹೇಳನ ಮಾಡಿದಷ್ಟು ಕಾಂಗ್ರೆಸ್ ನೆಲಕ್ಕಚ್ಚುತ್ತದೆ ಎಂದ ಅವರು, ಕಾಂಗ್ರೆಸ್ ಪಕ್ಷದವರಿಗೆ ಮೋದಿ ಮುಖ ಬಿಟ್ಟರೆ ಮತ್ತೇನು ಕಾಣಲು ಸಾಧ್ಯ ಎಂದು ಪ್ರಶ್ನಿಸಿದರು.
ಈಗ ಕಾಂಗ್ರೆಸ್ ನಾಯಕರಿಗೆ ನಿದ್ದೆಯಲ್ಲೂ ಮೋದಿಯೇ ಕಾಣುತ್ತಾರೆ ಎಂದು ವ್ಯಂಗ್ಯವಾಡಿದ ಅವರು, ಆಪರೇಷನ್ ಕಮಲದ ಬಳಿಕ ನಡೆದ ಮೊದಲ ಚುನಾವಣೆಯಲ್ಲಿ ನಿಮ್ಮ ಪ್ರತಿಪಕ್ಷ ನಾಯಕ ಎಷ್ಟು ಸುಪಾರಿ ಪಡೆದಿದ್ದರು ಎಂಬ ಬಗ್ಗೆ ಸುರ್ಜೆವಾಲ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು. ಇದೇ ವೇಳೆ, ಸಚಿವ ಅಶ್ವತ್ಥ್ ನಾರಾಯಣ ರಾಮನಗರದಲ್ಲಿ ನಡೆದುಕೊಂಡ ರೀತಿ ಸರಿಯಿಲ್ಲ. ನಿನ್ನೆ ಅವರು ರಾಮನಗರದಲ್ಲಿ ಹೋಮ ನಡೆಯುತ್ತಿದ್ದ ಜಾಗಕ್ಕೂ ಹೋಗದೇ ವೇದಿಕೆ ಕಾರ್ಯಕ್ರಮ ಉದ್ಘಾಟನೆ ಮಾಡಿದ್ದು ಸರಿಯಲ್ಲ ಎಂದರು.
ವಿಜಯೇಂದ್ರ ಮಂಡ್ಯದಲ್ಲಿ ಮನೆಯನ್ನಾದರೂ ಮಾಡಲಿ. ಅರಮನೆಯನ್ನಾದರೂ ಮಾಡಲಿ ಅಥವಾ ಶಿವಮೊಗ್ಗದಲ್ಲಿ ಕಟ್ಟಿರುವಂತೆ ದೊಡ್ಡ ದೊಡ್ದ ಕಟ್ಟಡವನ್ನಾದರೂ ಕಟ್ಟಲಿ. ಅದರಿಂದ ನಮಗೇನೂ ತೊಂದರೆ ಇಲ್ಲ. ನಮ್ಮ ಜೆಡಿಎಸ್ ಪಕ್ಷದ ಕಾರ್ಯಕರ್ತರು ಬಲಿಷ್ಠವಾಗಿದ್ದಾರೆ. ಜೆಡಿಎಸ್ ರೈತ ಪರ ಪಕ್ಷ, ಬಡವರ ಪರ ಪಕ್ಷ. ಹೀಗಾಗಿ ಮಂಡ್ಯದಲ್ಲಿ ಯಾವ ಸೀಮೆ ನಾಯಕ ಬಂದರೂ ಜೆಡಿಎಸ್ ಪಕ್ಷವನ್ನೂ ಏನೂ ಮಾಡಲೂ ಆಗುವುದಿಲ್ಲ ಎಂದು ಹೇಳಿದರು.
ಸರ್ಕಾರಿ ನೌಕರರಿಂದ ದೊಡ್ದ ದೊಡ್ದ ಸನ್ಮಾನ ಮಾಡಿಸಿಕೊಂಡವರು ಈಗ ಎಲ್ಲಿ ಹೋದರು ಎಂದು ಪರೋಕ್ಷವಾಗಿ ಮಾಜಿ ಸಿ.ಎಂ.ಯಡಿಯೂರಪ್ಪನ ಅವರ ವಿರುದ್ದ ಕಿಡಿಕಾರಿದರು. 7ನೇ ವೇತನ ಆಯೋಗದ ಜಾರಿ ಕುರಿತಾಗಿ ನೌಕರರಿಗೆ ಅಸಮಾಧಾನ ಇದೆ. ನಿಮ್ಮ ಪರವಾಗಿ ಯಾರಿದ್ದಾರೆ ಎಂಬುದನ್ನು ನೌಕರರು ಈಗಲಾದರೂ ತಿಳಿದುಕೊಳ್ಳಲಿ. ಯಾರು ನಿಮ್ಮ ಪರ ಕೆಲಸ ಮಾಡಿದ್ದರು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಶಿವಮೊಗ್ಗದಲ್ಲಿ ಜೆಡಿಎಸ್ಗೆ ಬೆಂಬಲ: ಶಿವಮೊಗ್ಗದ ಅಭ್ಯರ್ಥಿ ಕುರಿತು ಶೀಘ್ರದಲ್ಲಿ ಘೋಷಣೆ ಮಾಡಲಾಗುವುದು. ಜಿಲ್ಲೆಯಲ್ಲಿ ಪಂಚರತ್ನ ಯಾತ್ರೆ ಯಶಸ್ವಿಯಾಗಿ ನಡೆದಿದೆ. ಭದ್ರಾವತಿ ಕ್ಷೇತ್ರದಲ್ಲಿ ಯಾತ್ರೆ ಎಲ್ಲ ಕಾರ್ಯಕರ್ತರ, ಮತದಾರರ ಮನಗೆದ್ದಿದೆ ಎಂದು ಹೇಳಿದರು.
ಇದನ್ನೂಓದಿ: ನಾನು ಚುನಾವಣೆಗೆ ನಿಲ್ಲೋದಿಲ್ಲ, ಮತ್ತೆ ಸದನಕ್ಕೆ ಬರೋದಿಲ್ಲ: ಭಾವುಕರಾಗಿ ನುಡಿದ ಬಿಎಸ್ವೈ