ಶಿವಮೊಗ್ಗ: ಪೋಷಕರ ಮಾರ್ಗದರ್ಶನ, ಇಚ್ಛಾಶಕ್ತಿ ಹಾಗೂ ಗುರುಗಳ ಪ್ರೋತ್ಸಾಹದಿಂದ ವಿಜ್ಞಾನ ಕ್ಷೇತ್ರದಲ್ಲಿ ಯಶಸ್ಸು ಗಳಿಸಲು ಸಾಧ್ಯವಾಯಿತು ಎಂದು ಚಂದ್ರಯಾನ ಯೋಜನಾ ತಂಡದಲ್ಲಿದ್ದ ಇಸ್ರೋ ಸಂಸ್ಥೆಯ ವಿಜ್ಞಾನಿ ಪುಟ್ಟಮ್ಮ ಶಿವಾನಿ ಹೇಳಿದರು.
ಶಿವಮೊಗ್ಗ ನಗರದಲ್ಲಿ ಮಕ್ಕಳ ವಿದ್ಯಾಸಂಸ್ಥೆ ಮತ್ತು ತರುಣೋದಯ ಸಂಸ್ಥೆಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಸಂವಾದದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಭಾರತದ ಇಸ್ರೋ ಸಂಸ್ಥೆಯಲ್ಲಿ 20 ಸಾವಿರ ಉದ್ಯೋಗಿಗಳು ಇದ್ದು, ಎಲ್ಲ ವಿಷಯಗಳ ವಿದ್ಯಾಭ್ಯಾಸ ಮಾಡಿದವರು ಇದ್ದಾರೆ. ಚಂದ್ರಯಾನ ಯಶಸ್ಸಿನಲ್ಲಿ ಎಲ್ಲರ ಸಹಯೋಗ ಶ್ರಮ ಇದೆ ಎಂದು ತಿಳಿಸಿದರು.
ನನ್ನ ಪ್ರಾಥಮಿಕ ಶಾಲಾ ಸ್ನೇಹಿತರು, ಯೂತ್ ಹಾಸ್ಟೆಲ್ಸ್ ಅಸೋಸಿಯೇಷನ್ ತರುಣೋದಯ ಘಟಕದ ಸನ್ಮಾನವನ್ನು ಸಂತೋಷದಿಂದ ಸ್ವೀಕರಿಸಿದ್ದೇನೆ. ನನ್ನ ಸ್ನೇಹಿತರನ್ನು ಕಂಡು ಬಹಳ ಸಂತೋಷವಾಗಿದೆ ಎಂದರು.
ಕುಟುಂಬದ ಪ್ರತಿಯೊಬ್ಬರು ನನ್ನ ಏಳಿಗೆಯ ಬೆನ್ನೆಲುಬಾಗಿ ನಿಂತಿದ್ದರು. ಯಾವಾಗಲು ನನ್ನ ಏಳಿಗೆಗೆ ಸಹಕಾರ ಕೊಡುತ್ತಿದ್ದರು. ಇದರಿಂದ ಉನ್ನತ ಮಟ್ಟಕ್ಕೆ ಬೆಳೆಯಲು ಸಹಕಾರಿಯಾಯಿತು. ನನ್ನ ಕುಟುಂಬಕ್ಕೆ ಹೆಚ್ಚಿನ ಸಮಯ ಕೊಡಲು ಸಾಧ್ಯವಾಗಿಲ್ಲ ಅಂದುಕೊಂಡಿದ್ದೇನೆ. ನನ್ನ ಕೆಲಸದ ಒತ್ತಡ ಅಂತಹದ್ದು. ನನ್ನ ಇಬ್ಬರು ಮಕ್ಕಳು ಚೆನ್ನಾಗಿ ಓದಿಕೊಂಡು ಉತ್ತಮ ಜೀವನ ನಡೆಸುತ್ತಿರುವುದು ಸಂತಸದ ಸಂಗತಿ ಎಂದು ತಿಳಿಸಿದರು.
ಮಕ್ಕಳ ವಿದ್ಯಾ ಸಂಸ್ಥೆ 1982 ನೇ ಸಾಲಿನ ಏಳನೇ ತರಗತಿ ವಿದ್ಯಾರ್ಥಿ ಮಿತ್ರರು ಹಾಗೂ ಯೂತ್ ಹಾಸ್ಟೆಲ್ ತರುಣೋದಯ ಘಟಕದ ಪದಾಧಿಕಾರಿಗಳ ವತಿಯಿಂದ ಇಸ್ರೋ ಸಂಸ್ಥೆಯ ವಿಜ್ಞಾನಿ ಕೋಣಂದೂರು ಲಿಂಗಪ್ಪ ಪುತ್ರಿ ಪುಟ್ಟಮ್ಮ ಶಿವಾನಿ ಅವರನ್ನು ಸನ್ಮಾನಿಸಲಾಯಿತು. ಸಂವಾದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಗಣೇಶ್ ಅಂಗಡಿ ಸ್ವಾಗತಿಸಿದರು. ರಾಘವೇಂದ್ರ ನಿರೂಪಿಸಿದರು. ಹಳೆಯ ವಿದ್ಯಾರ್ಥಿಗಳು ಕುಟುಂಬದವರು, ಯೂತ್ ಹಾಸ್ಟೆಲ್ಸ್ ಚೇರ್ಮನ್ ವಾಗೇಶ್, ಸುರೇಶ್ ಕುಮಾರ್, ಡಾ. ಕೌಸ್ತುಭ, ಡಾ. ಶೇಖರ್ ಗೌಳೇರ್, ದಿಲೀಪ್ ನಾಡಿಗ್, ನಾಗರಾಜ್, ಲಕ್ಷ್ಮೀ, ರವೀಂದ್ರ, ಜಿ.ವಿಜಯ್‌ಕುಮಾರ್ ಮತ್ತಿತರರು ಹಾಜರಿದ್ದರು.
ಇದನ್ನೂಓದಿ: ಸೂರ್ಯಯಾನದ ಬಹುದೂರದ ಯಾತ್ರೆ ಆರಂಭ: 5ನೇ ಹಂತದ ಕಕ್ಷೆ ಬದಲಾವಣೆ ಪ್ರಕ್ರಿಯೆ ಯಶಸ್ವಿ