ಶಿವಮೊಗ್ಗ: ಸಾಗರದ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಶನಿವಾರ ರಾತ್ರಿ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. ವಾರ್ಡನ್ ಅವರ ಕುಮ್ಮಕ್ಕಿನ ಮೇರೆಗೆ ಶಾಲೆಯ ಪ್ರಾಂಶುಪಾಲರಾದ ರತ್ನಬಾಯಿ ಅವರ ವಿರುದ್ಧ ವಿದ್ಯಾರ್ಥಿಗಳು ಹಾಸ್ಟೆಲ್ ಬಿಟ್ಟು ರಾತ್ರಿ ತಹಶೀಲ್ದಾರ್ ಕಚೇರಿಗೆ ತೆರಳಿ ಪ್ರತಿಭಟನೆ ನಡೆಸಿದ್ದಾರೆಂದು ತಿಳಿದುಬಂದಿದೆ.
ಶಾಲೆಯಲ್ಲಿ ತಮಗೆ ಒಳ್ಳೆಯ ಊಟ ಸೇರಿದಂತೆ ಮೂಲಭೂತ ಸೌಕರ್ಯವಿಲ್ಲ. ಊಟಕ್ಕೆ ಬರೀ ಬಿಸಿನೀರಿನಂತಹ ಸಾರು ನೀಡಲಾಗುತ್ತಿದೆ. ಊಟ-ತಿಂಡಿ ಸೇರಿದಂತೆ ಇಲ್ಲಿ ಯಾವುದೂ ಸರಿ ಇಲ್ಲ. ಹಾಲಿ ವಾರ್ಡನ್ ಬಂದ ಮೇಲೆ ಸರಿಯಾಗಿ ಒಳ್ಳೆಯ ಊಟ- ತಿಂಡಿ ಸಿಗುತ್ತಿದೆ. ಮೂಲಭೂತ ಸೌಕರ್ಯ ಒದಗಿಸುವಲ್ಲಿ ಪ್ರಾಂಶುಪಾಲರು ವಿಫಲರಾಗಿದ್ದಾರೆ. ಈ ಕುರಿತು ಅವರನ್ನು ಕೇಳಿದ್ರೆ ಅವರು ನಮಗೆ ಹೊಡೆಯುತ್ತಾರೆ. ಹಾಗಾಗಿ ನಾವು ಅನಿವಾರ್ಯವಾಗಿ ಪ್ರತಿಭಟನೆಗೆ ಹೋಗಿದ್ದೆವು ಅಂತ ವಿದ್ಯಾರ್ಥಿಗಳು ತಿಳಿಸಿದ್ದಾರೆ.
ರಾತ್ರಿ 10 ಗಂಟೆ ಸುಮಾರಿಗೆ ವಿದ್ಯಾರ್ಥಿಗಳು ತಹಶೀಲ್ದಾರ್ ಕಚೇರಿ ಮುಂದೆ ಬಂದು ಪ್ರತಿಭಟನೆ ನಡೆಸುತ್ತಿರುವ ವಿಚಾರ ತಿಳಿದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಆಗಮಿಸಿ ವಿದ್ಯಾರ್ಥಿಗಳಿಗೆ ಬೆಂಬಲ ನೀಡಿದರು. ನಂತರ ಅವರ ಕಷ್ಟ ಅಲಿಸಿ, ರಾತ್ರಿ ವೇಳೆ ವಿದ್ಯಾರ್ಥಿಗಳು ಹೀಗೆ ಪ್ರತಿಭಟನೆ ನಡೆಸಬಾರದು ಎಂದು ತಿಳಿ ಹೇಳಿ ಹಾಸ್ಟೆಲ್ಗೆ ವಾಪಸ್ ಕಳುಹಿಸಿಕೊಟ್ಟರು.
ಇದನ್ನೂ ಓದಿ: ಮದ್ದೂರು ಎಟಿಎಂ ದರೋಡೆ ಪ್ರಕರಣ: ಓರ್ವನ ಬಂಧನ, ನಾಲ್ವರಿಗೆ ಶೋಧ
ಇನ್ನೂ ಪ್ರಿನ್ಸಿಪಾಲ್ ಹಾಗೂ ವಾರ್ಡನ್ ಅವರ ವೈಯಕ್ತಿಕ ದ್ವೇಷಕ್ಕೆ ವಿದ್ಯಾರ್ಥಿಗಳನ್ನು ಬಳಕೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಈ ಮೊದಲು ವಾರ್ಡನ್ ವಿರುದ್ಧ ಪ್ರಾಂಶುಪಾಲರು ಮೇಲಧಿಕಾರಿಗಳಿಗೆ ದೂರು ನೀಡಿದ್ದರು. ಹಾಗಾಗಿ ಮಕ್ಕಳನ್ನು ಪ್ರಾಂಶುಪಾಲರ ವಿರುದ್ಧ ಎತ್ತಿಕಟ್ಟಿ ವಾರ್ಡನ್ ಪ್ರತಿಭಟನೆ ಮಾಡಿಸಿದ್ದಾರೆ ಎನ್ನಲಾಗುತ್ತಿದೆ.