ಶಿವಮೊಗ್ಗ: ತಂದೆಯ ಸಾವಿನ ನೋವಿನಲ್ಲೇ ವಿದ್ಯಾರ್ಥಿನಿಯೊಬ್ಬರು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದಾರೆ. ಪರೀಕ್ಷೆಯ ನಂತರ ಮೊಬೈಲ್ನಲ್ಲಿ ತಂದೆಯ ಶವ ಸಂಸ್ಕಾರವನ್ನು ವೀಕ್ಷಿಸಿದ ಘಟನೆ ಹೊಸನಗರದಲ್ಲಿ ಗುರುವಾರ ನಡೆದಿದೆ. ಹೊಸನಗರ ತಾಲೂಕು ಗೇರುಪುರದ ಹಿಂದುಳಿದ ವರ್ಗಗಳ ಇಂದಿರಾಗಾಂಧಿ ವಸತಿ ಶಾಲೆಯ ವಿದ್ಯಾರ್ಥಿನಿ ಆರ್ಶಿಯಾ ಮನಿಯಾರ್ ಅವರ ತಂದೆ ಹೃದಯಾಘಾತದಿಂದ ಕೊಪ್ಪಳದಲ್ಲಿ ಸಾವನ್ನಪ್ಪಿದ್ದರು.
ತಂದೆಯ ಸಾವಿನ ಸುದ್ದಿಯನ್ನು ಶಿಕ್ಷಕರು ಆರ್ಶಿಯಾಗೆ ತಿಳಿಸಿರಲಿಲ್ಲ. ಆದರೆ ಮಗಳಿಗೆ ತಂದೆಯ ಅಂತಿಮ ದರ್ಶನ ಮಾಡಿಸಬೇಕೆಂದು ಪ್ರಾಂಶುಪಾಲರು ಹಾಗೂ ಶಿಕ್ಷಕರು ವಿದ್ಯಾರ್ಥಿನಿಯನ್ನು ಸುಮಾರು 700 ಕಿಮೀ ದೂರ ಕರೆದುಕೊಂಡು ಹೋಗಿ, ಆಕೆಯ ತಂದೆಯ ದರ್ಶನ ಮಾಡಿಸಿ, ಪರೀಕ್ಷೆಗೆ ತೊಂದರೆ ಆಗದಂತೆ ವಾಪಸ್ ಕರೆ ತಂದಿದ್ದಾರೆ. ಈ ಮೂಲಕ ಶಾಲೆಯವರು ಮಾನವೀಯತೆ ಮೆರೆದಿದ್ದಾರೆ.
ಆರ್ಶಿಯಾ ಪರೀಕ್ಷೆ ತಪ್ಪಿಸಬಾರದು ಹಾಗೂ ಆಕೆಯ ವಿದ್ಯಾರ್ಥಿ ಜೀವನ ಹಾಳಾಗಬಾರದು ಎಂದು ಶಾಲೆಯವರು ರಿಸ್ಕ್ ತೆಗೆದುಕೊಂಡು ಕರೆದುಕೊಂಡು ಹೋಗಿ ಹಾಗೆಯೇ ವಾಪಸ್ ಕರೆ ತಂದಿದ್ದಾರೆ. ಆರ್ಶಿಯಾಳನ್ನು ಮರುದಿನ ಪರೀಕ್ಷೆಗೆ ವಾಪಸ್ ಕರೆತಂದು, ಧೈರ್ಯವಾಗಿ ಪರೀಕ್ಷೆ ಬರೆಯಲು ತಿಳಿಸಿದ್ದಾರೆ. ಅಲ್ಲದೇ ಪರೀಕ್ಷೆ ಬರೆದ ನಂತರ ತಮ್ಮ ಮೊಬೈಲ್ನಲ್ಲಿ ಆಕೆ ತಂದೆಯ ಅಂತಿಮ ದರ್ಶನ ಪಡೆಯಲು ವಿಡಿಯೋ ಕರೆ ಮಾಡಿಕೊಟ್ಟಿದ್ದಾರೆ. ಆರ್ಶಿಯಾ ತಂದೆಯ ಅಂತಿಮ ದರ್ಶನ ಪಡೆದು ಗುರುಗಳ ಮಾತಿಗೆ ಕಟ್ಟುಬಿದ್ದು ಪರೀಕ್ಷೆ ಬರೆಯಲು ವಾಪಸ್ ಆಗಿದ್ದರು.
"ನಮ್ಮ ಅಪ್ಪಾ ತೀರಿಕೊಂಡಿದ್ದಾರೆ ಎಂದು ನನಗೆ ಗೂತ್ತಿರಲಿಲ್ಲ. ಪ್ರಿನ್ಸಿಪಾಲ್ ಸರ್ ಮನೆಯಲ್ಲಿ ಪೂಜೆ ಅಂತ ಹೇಳಿದ್ರು, ಈಗ ಹೋಗಿ ಈಗಲೇ ಬಂದು ಬಿಡೋಣ ಅಂತ ಹೇಳಿದ್ರು. ರಂಜಾನ್ ಹಬ್ಬ ಇದೆಯಲ್ಲ ಅದಕ್ಕೆ ಕರೀತಿರಬೇಕು ಅಂತ ಅಂದುಕೊಂಡಿದ್ದೆ. ಶಾಲೆಯಿಂದ ಮನೆಗೆ ಮಾತನಾಡಲು ಫೋನ್ ಕೊಟ್ಟಿದ್ರು, ಆದರೆ ಅಪ್ಪ ಮಾತನಾಡಿಸಲು ಸಿಗಲಿಲ್ಲ. ಊರಿಗೆ ಹೋದಮೇಲೆ ದೊಡ್ಡಮ್ಮ ಸಿಕ್ಕಿದ್ರು. ಅವರಿಗೆ ಏನಾಗಿದೆ? ಈಗ ಯಾಕೆ ಕೊಪ್ಪಳಕ್ಕೆ ಅಂತ ಕೇಳಿದೆ. ಅವರು ಅಪ್ಪನಿಗೆ ಸ್ವಲ್ಪ ಹುಷಾರಿಲ್ಲ ಅಂತ ಅಂದ್ರು ನನಗೆ ಆವಾಗ್ಲೆ ಭಯ ಅಗ್ತಾ ಇತ್ತು. ನಾನು ನಗುತ್ತಲೇ ಕೊಪ್ಪಳಕ್ಕೆ ಹೋಗಿದ್ದೆ. ಮನೆ ಹತ್ತಿರ ಹೋಗಿ ನೋಡಿದಾಗ ನನಗೆ ತುಂಬಾ ಬೇಜಾರಾಯ್ತು, ನಮ್ಮ ಅಪ್ಪ ಇಷ್ಟು ಬೇಗ ನಮ್ಮನ್ನು ಬಿಟ್ಟು ಹೋಗ್ತಾರೆ ಅಂತ ನಾನು ಅಂದುಕೊಂಡಿರಲಿಲ್ಲ. ಮನೆಯಲ್ಲಿ ಅಜ್ಜಿ ದೊಡ್ಡವರು ಅಂತ ಇದ್ರು, ಅವರು ನಮ್ಮನ್ನು ಬಿಟ್ಟು ಹೋದ್ರು. ಈಗ ನಮ್ಮಪ್ಪನೂ ಬಿಟ್ಟು ಹೋದ್ರು. ಈಗ ಮನೆಯಲ್ಲಿ ಯಾರೂ ದೊಡ್ಡವರು ಅಂತ ಇಲ್ಲ."
"ಕೊಪ್ಪಳಕ್ಕೆ 4 ಕ್ಕೆ ಹೋದೆವು, ಪುನಃ 5 ಗಂಟೆಗೆ ವಾಪಸ್ ಬಂದೆವು. ನನ್ ಜೊತೆ ಪ್ರಿನ್ಸಿಪಾಲ್, ವಾರ್ಡನ್ ಬಂದಿದ್ರು. ಅವರೆಲ್ಲಾ ನನಗೆ ಧೈರ್ಯ ನೀಡಿದ್ರು. ಮನೆಯಲ್ಲಿ ಅಮ್ಮ ಸಪ್ಲಿಮೆಂಟ್ ಬರೆಯಬಹುದು, ಇಲ್ಲೇ ಇರು ಅಂದ್ರು, ಆದರೆ, ಪ್ರಿನ್ಸಿಪಾಲ್ ಸರ್ ನನ್ನ ಜೊತೆ ಬಂದಿದ್ರು, ನನ್ನಿಂದ ಶಾಲೆಗೆ ಕೆಟ್ಟ ಹೆಸರು ಬರುತ್ತದೆ ಎಂದೆ, ಅದಕ್ಕೆ ಅಣ್ಣ, ಅಕ್ಕ ಹೋಗು ಅಂದ್ರು. ಅಮ್ಮ ಬೇಡ ಅಂದ್ರು, ಆದರೂ ನಾನು ವಾಪಸ್ ಬಂದೆ. ನನಗೆ ಎಲ್ಲಾ ಟೀಚರ್ಸ್ ತಿಂಡಿ ತಿನ್ನಿಸಿ, ಪರೀಕ್ಷೆ ಬರೆಯಲು ಕಳುಹಿಸಿಕೊಟ್ಟರು" ಎಂದು ವಿದ್ಯಾರ್ಥಿನಿ ನೋವಿನಿಂದ ಶಾಲೆಯ ಪ್ರಿನ್ಸಿಪಾಲ್ ಹಾಗೂ ಶಿಕ್ಷಕರ ಕಾರ್ಯವನ್ನು ಮೆಚ್ಚಿಕೊಂಡಿದ್ದಾರೆ.
ಇದನ್ನೂ ಓದಿ: ಪರೀಕ್ಷೆ ಹಿಂದಿನ ದಿನ ತಂದೆ ಸಾವು: ನೋವಿನ ಮಧ್ಯೆಯೂ 10ನೇ ತರಗತಿ ಪರೀಕ್ಷೆ ಬರೆದ ವಿದ್ಯಾರ್ಥಿನಿ