ಶಿವಮೊಗ್ಗ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ನೇತೃತ್ವದ ಸತ್ಯ ಶೋಧನಾ ಸಮಿತಿ ಇಂದು ಮೆಗ್ಗಾನ್ ಆಸ್ಪತ್ರೆಗೆ ಭೇಟಿ, ರಾಗಿಗುಡ್ಡ ಕಲ್ಲು ತೂರಾಟ ಪ್ರಕರಣದಲ್ಲಿ ಗಾಯಗೊಂಡವರ ಆರೋಗ್ಯ ವಿಚಾರಣೆ ನಡೆಸಿತು. ಬಳಿಕ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಟೀಲ್, "ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ಹಿಂದೂಗಳ ಮನೆ ಮೇಲೆ ದಾಳಿ ನಡೆದಿದೆ. ಇದು ಪೂರ್ವನಿಯೋಜಿತ ಕೃತ್ಯ. ಎರಡು ಗಂಟೆಗಳ ಕಾಲ ಕಲ್ಲು ತೂರಾಟ ನಡೆದಿತ್ತು" ಎಂದರು.
"ನಾನು ಇಂದು ಪ್ರತ್ಯಕ್ಷದರ್ಶಿಗಳು ಹಾಗೂ ಗಾಯಾಳುಗಳನ್ನು ಭೇಟಿ ಮಾಡಿದ್ದೇನೆ. ರಾಗಿಗುಡ್ಡದ ಜನರು ಸಂಪೂರ್ಣ ಮಾಹಿತಿ ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಈ ರೀತಿಯ ಅನೇಕ ಘಟನೆಗಳು ನಡೆದಿವೆ. ಇವೆಲ್ಲವನ್ನೂ ತನಿಖೆಗೆ ಒಳಪಡಿಸಬೇಕು. ರಾಗಿಗುಡ್ಡ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ನೀಡಬೇಕು" ಎಂದು ಒತ್ತಾಯಿಸಿದರು.
"ಇದೇ ರಾಗಿಗುಡ್ಡದಲ್ಲಿ ಈ ಹಿಂದೆ ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆಗಳು ನಡೆದಿವೆ. ಅವೆಲ್ಲವೂ ಶಾಂತಿಯುತವಾಗಿತ್ತು. ಆದರೆ ಈದ್ ಮಿಲಾದ್ ಮೆರವಣಿಗೆಯಲ್ಲಿ ಘಟನೆ ನಡೆದಿದೆ. ಸರ್ಕಾರ ಹಾಗೂ ಪೊಲೀಸರ ವೈಫಲ್ಯದಿಂದಾಗಿಯೇ ಕೃತ್ಯ ಸಂಭವಿಸಿದೆ. ಮೆರವಣಿಗೆಗೆ ಪೊಲೀಸರ ಅನುಮತಿ ಪಡೆದುಕೊಳ್ಳಬೇಕಿತ್ತು. ಆದರೆ ಆ ಕೆಲಸವಾಗಿಲ್ಲ" ಎಂದು ಆರೋಪಿಸಿದರು.
"ಗಲಭೆಯಲ್ಲಿ ಪೊಲೀಸರು, ಎಸ್.ಪಿ. ಮೇಲೂ ದಾಳಿಯಾಗುತ್ತದೆ. ಪೊಲೀಸರ ಮೇಲೆಯೇ ದಾಳಿ ನಡೆದರೆ ಹೇಗೆ? ಸಾಮಾನ್ಯ ಜನರಿಗೆ ರಕ್ಷಣೆ ಯಾರು ಕೊಡ್ತಾರೆ ಎಂಬುದೇ ಪ್ರಶ್ನೆ. ಇಲ್ಲಿ ಟಾರ್ಗೆಟ್ ಮಾಡಿ ಕಲ್ಲು ತೂರಾಟ ನಡೆಸಿದ್ದಾರೆ. ಗಣೇಶೋತ್ಸವದಲ್ಲಿ ಭಾಗಿಯಾಗಿದ್ದ ಯುವಕರು ಹಾಗೂ ಮಹಿಳೆಯರ ಮೇಲೆ ದಾಳಿ ನಡೆಸಲಾಗಿದೆ" ಎಂದು ಹೇಳಿದರು.
"ಕೆಲವರ ಮನೆಗಳ ಮೇಲೆ ಮಾತ್ರ ಕಲ್ಲು ತೂರಾಟ ನಡೆದಿದೆ. ಮಹಿಳೆಯರು, ಮಕ್ಕಳು, ಬಾಣಂತಿಯರು ಎಂದು ನೋಡದೇ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿದವರ ಬದಲಾಗಿ ಏಟು ತಿಂದವರನ್ನು ಜೈಲಿಗೆ ಕಳುಹಿಸುವ ಕೆಲಸವಾಗಿದೆ. ಜಿಲ್ಲಾ ಮಂತ್ರಿಗಳು ಬಂದು ಹೋದ ಬಳಿಕ ಹಿಂದೂ ಯುವಕರನ್ನು ಜೈಲಿಗೆ ಹಾಕುತ್ತಿದ್ದಾರೆ" ಎಂದು ಕಟೀಲ್ ದೂರಿದರು.
"ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ವಿಜಯೋತ್ಸವ ಆಚರಿಸಲಾಗಿದೆ. ಕೆಲ ಕಿಡಿಗೇಡಿಗಳು ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದರು. ಅವರನ್ನು ಈವರೆಗೂ ಬಂಧಿಸಿಲ್ಲ. ರಾಗಿಗುಡ್ಡ ಪ್ರಕರಣದ ಹಿಂದೆಯೂ ಭಯೋತ್ಪಾದನಾ ಸಂಘಟನೆಗಳ ಪಾತ್ರವಿದೆ. ಭಯೋತ್ಪಾದನೆ ಚಟುವಟಿಕೆಗಳು ನಡೆಸುವ ಕಿಡಿಗೇಡಿಗಳೇ ಈ ಮೆರವಣಿಗೆಯಲ್ಲೂ ಪಾಲ್ಗೊಂಡು ಕೃತ್ಯ ನಡೆಸಿದ್ದಾರೆ" ಎಂದು ಕಟೀಲ್ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಶಿವಮೊಗ್ಗ ಕಲ್ಲು ತೂರಾಟ ಪ್ರಕರಣ: ರಾಗಿಗುಡ್ಡಕ್ಕಿಂದು ಬಿಜೆಪಿಯ ಸತ್ಯಶೋಧನಾ ಸಮಿತಿ ಭೇಟಿ