ಶಿವಮೊಗ್ಗ: ಜಿಲ್ಲೆಯಾದ್ಯಂತ ಮೊಬೈಲ್ ನೆಟ್‍ವರ್ಕ್ ಸಂಪರ್ಕ ಕಲ್ಪಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದ್ದು, ಬಾಕಿ ಉಳಿದಿರುವ ಟವರ್ ನಿರ್ಮಾಣ ಕಾಮಗಾರಿಗಳನ್ನು ನಿಗದಿತ ಅವಧಿಯ ಒಳಗಾಗಿ ಪೂರ್ಣಗೊಳಿಸಬೇಕು ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ಸೂಚನೆ ನೀಡಿದರು.
ಸಂಪರ್ಕ ವ್ಯವಸ್ಥೆಯನ್ನು ಉತ್ತಮಪಡಿಸುವ ಉದ್ದೇಶದಿಂದ ಕರೆಯಲಾಗಿದ್ದ ಮೊಬೈಲ್ ನೆಟ್‍ವರ್ಕ್ ಆಪರೇಟರ್ಗಳ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಒಟ್ಟು 241 ಬಿಎಸ್‍ಎನ್‍ಎಲ್ ಟವರ್ಗಳಿದ್ದು, ಖಾಸಗಿ ಸಂಸ್ಥೆಗಳ ಜೊತೆ 37 ಟವರ್ಗಳನ್ನು ಹಂಚಿಕೊಳ್ಳಲಾಗಿದೆ. ಬಿಎಸ್‍ಎನ್‍ಎಲ್ ಟವರ್ಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಲು, ಫ್ರೀಕ್ವೆನ್ಸಿ ಉತ್ತಮಪಡಿಸಲು ಕ್ರಮ ಕೈಗೊಳ್ಳಬೇಕಾಗಿದೆ. ಜಿಲ್ಲೆಯಲ್ಲಿ ಬಿಎಸ್‍ಎನ್‍ಎಲ್ ಸಂಪರ್ಕ ಜಾಲವನ್ನು ಉತ್ತಮಪಡಿಸಲು ಅಗತ್ಯವಿರುವ ನೆರವನ್ನು ಒದಗಿಸುವ ಕುರಿತು ಬೆಂಗಳೂರಿನಲ್ಲಿ ಬಿಎಸ್‍ಎನ್‍ಎಲ್ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು. ಈ ಹಿನ್ನೆಲೆಯಲ್ಲಿ ಸಂಪೂರ್ಣ ಮಾಹಿತಿಯನ್ನು ಒದಗಿಸುವಂತೆ ಅವರು ತಿಳಿಸಿದರು.
ಕೊರೊನಾದಿಂದಾಗಿ ಹಲವಾರು ಮಂದಿ ವರ್ಕ್ ಫ್ರಮ್ ಹೋಂ ಆಗಿ ಕಾರ್ಯನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳಿಗೆ ಆನ್‍ಲೈನ್ ತರಗತಿಗಳು ನಡೆಯುತ್ತಿವೆ. ಈ ಹಿನ್ನೆಲೆ, ಹಲವಾರು ಕಡೆಗಳಿಂದ ನೆಟ್‍ವರ್ಕ್ ಸಮಸ್ಯೆ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಈ ನಿಟ್ಟಿನಲ್ಲಿ ಸಂಪರ್ಕಜಾಲವನ್ನು ಉತ್ತಮಪಡಿಸಿ ಗುಣಮಟ್ಟದ ಸೇವೆಯನ್ನು ಒದಗಿಸಲು ತುರ್ತು ಕ್ರಮ ಕೈಗೊಳ್ಳಬೇಕಾಗಿದೆ ಎಂದು ಅವರು ಹೇಳಿದರು.
ಮೊಬೈಲ್ ನೆಟ್‍ವರ್ಕ್ ಇಲ್ಲದ ಕಡೆಗಳಲ್ಲಿ ಟವರ್ಗಳನ್ನು ಸ್ಥಾಪಿಸುವ ಕುರಿತಾದ ಸಾಧ್ಯತೆಗಳನ್ನು ಪರಿಶೀಲಿಸಲು ಖಾಸಗಿ ಸಂಸ್ಥೆಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಜಿಯೋ ಸಂಸ್ಥೆ ಅಂತಹ 22ಕಡೆಗಳಲ್ಲಿ ಟವರ್ ನಿರ್ಮಿಸುವುದು ಬಾಕಿಯಿದ್ದು, ಏರ್ಟೆಲ್ 42ಕಡೆಗಳಲ್ಲಿ ಟವರ್ ನಿರ್ಮಿಸಬೇಕಾಗಿದೆ. ಈ ಸಂಸ್ಥೆಗಳಿಗೆ ಟವರ್ ನಿರ್ಮಾಣಕ್ಕೆ ಸ್ಥಳ ಒದಗಿಸಲು ಅಡೆತಡೆಗಳನ್ನು ಜಿಲ್ಲಾಧಿಕಾರಿ ಬಗೆಹರಿಸಲಿದ್ದು, ಆದಷ್ಟು ಬೇಗನೆ ಟವರ್ ನಿರ್ಮಾಣ ಪೂರ್ಣಗೊಳಿಸಬೇಕು ಎಂದು ಅವರು ಸೂಚಿಸಿದರು.