ಶಿವಮೊಗ್ಗ: ಚಿತ್ರರಂಗದಲ್ಲಿ ಬಯೋಪಿಕ್ ಸಿನಿಮಾಗಳ ಹಾವಳಿ ಹೆಚ್ಚಾಗಿದೆ. ಕ್ರಿಕೆಟ್, ಸಿನಿಮಾ, ಉದ್ಯಮ ಹೀಗೆ ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆಯನ್ನು ತೆರೆಯ ಮೇಲೆ ತೋರಿಸಲಾಗುತ್ತದೆ. ಇದೀಗ ರಾಜಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಬಯೋಪಿಕ್ ತೆರೆಗೆ ತರಲು ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, 'ನನ್ನ ಕುರಿತು ಸಿನಿಮಾ ಮಾಡಲು ಕನಕಗಿರಿಯಿಂದ ಬಂದಿದ್ದರು. ಮುಂದೆ ಏನಾಯಿತು ಎಂದು ನನಗೆ ತಿಳಿದಿಲ್ಲ. ನಾನಂತೂ ಚಲನಚಿತ್ರದಲ್ಲಿ ನಟಿಸುವುದಿಲ್ಲ' ಎಂದು ಸ್ಪಷ್ಟಪಡಿಸಿದರು.
'ಸಿ.ಟಿ.ರವಿ ಒಬ್ಬ ಕೋಮುವಾದಿ': ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಒಬ್ಬ ಕೋಮುವಾದಿ ಮನುಷ್ಯ. ಆತನ ಹೇಳಿಕೆಗೆ ನಾನು ಪ್ರತಿಕ್ರಿಯಿಸಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿ.ಟಿ.ರವಿ ಅವರಿಗೆ ಜಾತ್ಯತೀತ ತತ್ವ ಅರ್ಥವಾಗಲ್ಲ. ಅವರಿಗೆ ಸಂವಿಧಾನದ ತತ್ವ ಅರ್ಥವಾಗಲ್ಲ ಎಂದರು.
ಜನಾಕ್ರೋಶ ಸಮಾವೇಶ ಯಶಸ್ವಿ: ನಿನ್ನೆ ನಡೆದ ಮಲೆನಾಡ ಜನಾಕ್ರೋಶ ಸಮಾವೇಶ ಯಶಸ್ವಿಯಾಗಿದೆ. ನಾನು ಸಿಎಂ ಆಗಿದ್ದಾಗ ಶರಾವತಿ ಸಂತ್ರಸ್ತರಿಗಾಗಿ 56 ಡಿನೋಟಿಫಿಕೇಶನ್ ಮಾಡಿದ್ದೆ. ಮದನ್ ಗೋಪಾಲ್ ಸಮಿತಿ ನೀಡಿದ ಶಿಫಾರಸ್ಸಿನ ಮೇರೆಗೆ ಡಿನೋಟಿಫಿಕೇಶನ್ ಮಾಡಲಾಗಿತ್ತು. ಆದರೆ ಗಿರೀಶ್ ಆಚಾರ್ ಎಂಬಾತ ಹೈಕೋರ್ಟ್ಗೆ ಹೋಗಿದ್ದ ಕಾರಣ ಡಿನೋಟಿಫಿಕೇಶನ್ ರದ್ದಾಗಿದೆ.
ಇದನ್ನು ಮೇಲ್ಮನವಿ ಮಾಡದೆ ಶರಾವತಿ ಸಂತ್ರಸ್ತರಿಗೆ ಬಿಜೆಪಿ ಸರ್ಕಾರ ಅನ್ಯಾಯ ಮಾಡಿದೆ. ಹೌದು ನಮ್ಮ ಸರ್ಕಾರ ಏನೂ ಮಾಡಲಿಲ್ಲ. ಆದರೆ ಯಡಿಯೂರಪ್ಪನವರು ಅಧಿಕಾರದಲ್ಲಿ ಇದ್ರಲ್ಲ ಅವರು ಯಾಕೆ ಇದನ್ನು ಮಾಡಲಿಲ್ಲ ಎಂದು ಪ್ರಶ್ನಿಸಿದರು.
ಯಡಿಯೂರಪ್ಪ ಹಸಿರು ಟವಲ್ ಹಾಕಿಕೊಂಡು ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಬಿಜೆಪಿಗೆ ಡಕಾಯಿತಿ, ಮರ್ಡರ್ ಮತ್ತಿತ್ತರ ಕೇಸ್ನಲ್ಲಿದ್ದವರು ಸೇರಿಕೊಳ್ಳುತ್ತಿದ್ದಾರೆ. ಅಂತಹವರ ಜತೆ ಮೋಹನ್, ಸೂರ್ಯ, ಮತ್ತಿತ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಿರುತ್ತಾರೆ. ಸಂಸದರು, ಮಂತ್ರಿಗಳ ಜತೆ ಇದ್ದರೆ ಪೊಲೀಸರು ಸೈಲೆಂಟ್ ಸುನೀಲ್ನನ್ನು ಬಂಧಿಸುತ್ತಾರೆಯೇ ಎಂದು ಪ್ರಶ್ನಿಸಿದರು.
ಬಿಜೆಪಿಯರು ಹೇಳೋದು ಆಚಾರ ತಿನ್ನೋದು ಬದನೆಕಾಯಿ ಎಂಬಂತೆ ಆಗಿದೆ. ನಲಪಾಡ್, ವಿನಯ್ ಕುಲಕರ್ಣಿ ಅವರ ವಿರುದ್ಧ ಆರೋಪ ಅಷ್ಟೇ, ಆರೋಪಿಗಳಾಗಿಲ್ಲ. ಹಾಗೆ ನೋಡಿದರೆ ಅಮಿತ್ ಶಾ ವಿರುದ್ಧ ಗಡಿಪಾರು ಆದೇಶ ಮಾಡಲಾಗಿತ್ತು ಎಂದರು.
ನನಗೆ ಕೋಲಾರ, ಚಿಕ್ಕನಾಯಕನಹಳ್ಳಿ, ವರುಣ, ಹೆಬ್ಬಾಳ ಸೇರಿದಂತೆ ಅನೇಕ ಕಡೆ ಸ್ಪರ್ಧಿಸುವಂತೆ ಆಹ್ವಾನ ಬರುತ್ತಿದೆ. ನಾನು ಸ್ಪರ್ಧಿಸುವ ಕುರಿತು ಅರ್ಜಿಯಲ್ಲಿ ಹೈ ಕಮಾಂಡ್ಗೆ ಬಿಟ್ಟ ವಿಚಾರ ಎಂದು ಬರೆದಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ: ಶರಾವತಿ ಸಂತ್ರಸ್ತರ ಪರ ಬಿಜೆಪಿ ಸರ್ಕಾರ ಮೊಸಳೆ ಕಣ್ಣೀರು ಹಾಕ್ತಾ ಇದೆ: ಸಿದ್ದರಾಮಯ್ಯ