ಶಿವಮೊಗ್ಗ: ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಶಾಲಾ ಕಾಲೇಜುಗಳಿಗೆ ಹೆಚ್ಚಿನ ಆದ್ಯತೆ ನೀಡಿ ಅರ್ಹ ವಿದ್ಯಾರ್ಥಿಗಳನ್ನು ಮತದಾರರನ್ನಾಗಿ ಮಾಡಬೇಕು. ಹಾಗೆಯೇ ಕಾಲೇಜಿನಿಂದ ಹೊರಗುಳಿದಿರುವ ಮತದಾರರ ನೋಂದಣಿಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಮನೆ ಮನೆ ಸಮೀಕ್ಷೆ ಸಂದರ್ಭದಲ್ಲಿ ಹೈಸ್ಕೂಲ್ ಶೈಕ್ಷಣಿಕ ದತ್ತಾಂಶವನ್ನು ಆಧರಿಸಿ ಯುವ ಮತದಾರರನ್ನು ಗುರುತಿಸಬೇಕು ಎಂದರು.
ಮತದಾರರ ಪಟ್ಟಿಯಲ್ಲಿ ನೋಂದಣಿ, ಬದಲಾವಣೆ ಇತ್ಯಾದಿಗಳಿಗಾಗಿ ಸಲ್ಲಿಸುವ ಎಲ್ಲಾ ಅರ್ಜಿಗಳನ್ನು ಆದ್ಯತೆ ಮೇರೆಗೆ ಪರಿಶೀಲನಾ ವಿಲೇವಾರಿ ಮಾಡಬೇಕು. ಸೊರಬ ವಿಧಾನಸಭಾ ಕ್ಷೇತ್ರದಲ್ಲಿ 1008 ಪುರುಷ ಮತದಾರರಿಗೆ 970 ಮಹಿಳಾ ಮತದಾರರ ಅನುಪಾತವಿದೆ. ಲಿಂಗ ಅನುಪಾದಲ್ಲಿ ಇಷ್ಟು ವ್ಯತ್ಯಾಸ ಬರಲು ಕಾರಣವೇನು ಎಂದು ಪರಿಶೀಲಿಸಿ ಸರಿಪಡಿಸಬೇಕು ಎಂದು ಸೂಚಿಸಿದರು.
ಮತದಾರರ ಪಟ್ಟಿಯಿಂದ ಯಾವುದೇ ಮತದಾರರ ಹೆಸರನ್ನು ತೆಗೆದು ಹಾಕುವ ಸಂದರ್ಭದಲ್ಲಿ ಬಿಎಲ್ಓಗಳು ಖುದ್ದಾಗಿ ಆ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಖುದ್ದಾಗಿ ಪರಿಶೀಲಿಸದೆ ಹೆಸರು ತೆಗೆದು ಹಾಕಿ ಗೊಂದಲಕ್ಕೆ ಅವಕಾಶ ಮಾಡಬಾರದು. ವಲಸೆ ಹೋಗಿರುವವರು ನೀಡಿರುವ ವಿಳಾಸದಲ್ಲಿ ಇಲ್ಲದಿರುವ ಮತದಾರರನ್ನು ಖಾತ್ರಿ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ರಾಷ್ಟ್ರೀಯ ಮತದಾರರ ದಿನಾಚರಣೆ ಸಂದರ್ಭದಲ್ಲಿ ಮಾತ್ರವಲ್ಲದೆ ಇತರ ಸರ್ಕಾರಿ ಕಾರ್ಯಕ್ರಮಗಳಲ್ಲೂ ಸಹ ಮತದಾರರ ನೊಂದಣಿ ಮಾಡಿಸಬೇಕು. ಮತದಾರರ ಪಟ್ಟಿಗೆ ಹೆಸರು ಸೇರಿಸಲು ಜಾಗೃತಿಗಾಗಿ ಬೀದಿನಾಟಕ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದರು.
ಈ ವೇಳೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಅಪರ ಜಿಲ್ಲಾಧಿಕಾರಿ ಅನುರಾಧ, ಜಿ.ಪಂ. ಸಿಇಓ ವೈಶಾಲಿ, ಪಾಲಿಕೆ ಆಯುಕ್ತ ಚಿದಾನಂದ ವಟಾರೆ ಸೇರಿ ಜಿಲ್ಲೆಯ ತಹಶೀಲ್ದಾರ್ ಗಳು ಹಾಜರಿದ್ದರು.