ಶಿವಮೊಗ್ಗ : ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನುದಾನದಿಂದಾಗಿ ಜಿಲ್ಲೆಯಲ್ಲಿ ಕಳೆದ ಎರಡು ವರ್ಷದಲ್ಲಿ ಸಾವಿರಾರು ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿಗಳು ಜಿಲ್ಲೆಯಲ್ಲಿ ನಡೆಯುತ್ತಿವೆ. ಇದೀಗ ಆ ಸಾಲಿಗೆ ಹೊಸ ಯೋಜನೆಯೊಂದು ಸೇರಿಕೊಂಡಿದ್ದು, ಕ್ರೀಡಾಪಟುಗಳು ಹಾಗೂ ಕ್ರೀಡಾಸಕ್ತರ ಸಂತಸಕ್ಕೆ ಕಾರಣವಾಗಿದೆ.
ಜಿಲ್ಲೆಯಲ್ಲಿ ವಿಶೇಷ ಕ್ರೀಡಾ ವಲಯ ಸ್ಥಾಪನೆಗೆ ಈಗಾಗಲೇ ಕೆಲವು ಸ್ಥಳಗಳನ್ನು ಗುರುತಿಸಲಾಗಿದೆ. ಕೃಷಿ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ 50 ಎಕರೆ ಪ್ರದೇಶ, ಲಯನ್ ಸಫಾರಿ ಎದುರು 50 ಎಕರೆ ಪ್ರದೇಶ ಮತ್ತು ಪಶು ವೈದ್ಯಕೀಯ ಕಾಲೇಜು ಆವರಣದಲ್ಲಿರುವ 25 ಎಕರೆ ಪ್ರದೇಶ ಗುರುತಿಸಲಾಗಿದೆ.
ಹಲವು ಬಾರಿ ಕ್ರೀಡಾ ಪ್ರಾಧಿಕಾರದ ಅಧಿಕಾರಿಗಳು ಬಂದು ಈಗಾಗಲೇ ಸ್ಥಳ ಪರಿಶೀಲಿಸಿದ್ದಾರೆ. ಜಿಲ್ಲೆಯಲ್ಲಿನ ಕೃಷಿ ವಿಶ್ವವಿದ್ಯಾಲಯ ಸ್ಥಳಾಂತರವಾಗುತ್ತಿರುವ ಕಾರಣ ಬಹುತೇಕ ಕೃಷಿ ವಿವಿಯ ಆವರಣವೇ ವಿಶೇಷ ಕ್ರೀಡಾ ವಲಯ ನಿರ್ಮಾಣಕ್ಕೆ ಅಂತಿಮಗೊಳ್ಳಲಿದೆ.
ವಿಶೇಷ ಕ್ರೀಡಾ ವಲಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಅವರು ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ. ವಿಶೇಷ ಕ್ರೀಡಾ ವಲಯ ನಿರ್ಮಾಣ ಜಾಗವನ್ನು ಘೋಷಿಸಲಿದ್ದಾರೆ. ಈ ಯೋಜನೆಯಿಂದ ಕೇವಲ ಶಿವಮೊಗ್ಗ ಜಿಲ್ಲೆ ಮಾತ್ರವಲ್ಲದೆ ನೆರೆಯ ಜಿಲ್ಲೆಗಳ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ವೃತ್ತಿಪರ ತರಬೇತಿ ನೀಡಲು ಸಾಧ್ಯವಾಗಲಿದೆ.
ಇದರ ಜೊತೆಗೆ ಕೇಂದ್ರದ ಸ್ಮಾರ್ಟ್ ಸಿಟಿ ಯೋಜನೆಯಡಿ ಶಿವಮೊಗ್ಗದ ನೆಹರೂ ಸ್ಟೇಡಿಯಂನಲ್ಲಿ 4 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳುತ್ತಿರುವ ಕಾಮಗಾರಿಗಳಿಗೆ ಮತ್ತು ಸಹ್ಯಾದ್ರಿ ಕಾಲೇಜಿನಲ್ಲಿ 4 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಒಳಾಂಗಣ ಕ್ರೀಡಾಂಗಣ ಕಾಮಗಾರಿಗಳಿಗೂ ಸಹ ಕೇಂದ್ರ ಕ್ರೀಡಾ ಸಚಿವರು ಅಂದು ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ.
ಓದಿ : ಫೆ.21 ಕ್ಕೆ ಶಿವಮೊಗ್ಗಕ್ಕೆ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಭೇಟಿ: ಸಂಸದ ರಾಘವೇಂದ್ರ