ಶಿವಮೊಗ್ಗ: ನಿನ್ನೆ ಚಿಕ್ಕಲ್ನ ಹೊಸ ಪ್ಲೈ ಓವರ್ ಕೆಳಗೆ ನಡೆದ ಮಲ್ಲೇಶ್ ಅಲಿಯಾಸ್ ಮಲ್ಲನ ಮರ್ಡರ್ ಕೇಸ್ನಲ್ಲಿ 7 ಜನ ಭಾಗಿಯಾಗಿದ್ದು, ಇದರಲ್ಲಿ ಮೂವರನ್ನು ಬಂಧಿಸಲಾಗಿದೆ ಎಂದು ಎಸ್ಪಿ ಮಿಥುನ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಲ್ಲೇಶ್ (42) ನಿನ್ನೆ ತನ್ನ ದ್ವಿಚಕ್ರ ವಾಹನದಲ್ಲಿ ಹೋಗುವಾಗ ಎರಡು ಬೈಕ್ನಲ್ಲಿ ಬಂದ ಆರು ಜನರ ತಂಡ ಮಲ್ಲೇಶನ ಬೈಕ್ಗೆ ಡಿಕ್ಕಿ ಹೊಡೆಸಿದ್ದಾರೆ. ಇದರಿಂದ ಅವರು ಕೆಳಗೆ ಬಿದ್ದಿದ್ದಾರೆ. ಕೆಳಗೆ ಬಿದ್ದು ಮೇಲೆ ಏಳುವಷ್ಟರಲ್ಲಿ ಅವರ ಮೇಲೆ ಬೈಕ್ನಲ್ಲಿ ಬಂದವರು ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿ, ಹೊಟ್ಟೆ, ಕುತ್ತಿಗೆ, ಮುಖದ ಮೇಲೆ ಮನಸ್ಸೋ ಇಚ್ಛೆ ದಾಳಿ ನಡೆಸಿದ್ದಾರೆ. ಇದರಿಂದ ಮಲ್ಲೇಶ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದರು.
ಇದು ಅಕ್ಕನ ಸಾವಿಗೆ ತಮ್ಮನ ರಿವೇಂಜ್ ಮರ್ಡರ್ : ಕೊಲೆಯಾದ ಮಲ್ಲೇಶ್ ಗಾಂಧಿಬಜಾರ್ ಬಳಿಯ ತಿಗಳರ ಬೀದಿಯ ನಿವಾಸಿ. ಈತ ಕುರಿ ಕಾಳಗದಂತಹ ಕೆಲಸ ಮಾಡಿಸುತ್ತಿದ್ದ. ಕುರಿ ಕೊಳ್ಳುವ, ಮಾರಾಟ ಮಾಡುವ ಕೆಲಸ ಮಾಡುತ್ತಿದ್ದನು. ಅಲ್ಲದೇ ಒಂದು ಪ್ರಕರಣದಲ್ಲಿ ಈತನ ವಿರುದ್ದ ರೌಡಿಶೀಟ್ ಓಪನ್ ಆಗಿರುತ್ತದೆ. ಇದರಿಂದ ಹುಡುಗಿ ಮನೆಯವರು ಮದುವೆಗೆ ವಿರೋಧ ಮಾಡಿರುತ್ತಾರೆ. ಈತ ತನ್ನ ಅತ್ತೆಯ ಮಗಳನ್ನು ಪ್ರೀತಿಸುತ್ತಿದ್ದ. ಆಕೆ ಎಂಎಸ್ಸಿ ಓದಿದ್ದಳು. ಈತ ತನ್ನನ್ನೇ ಪ್ರೀತಿಸುವಂತೆ ಕಾಡುತ್ತಿದ್ದನು. ಆಕೆ ಒಳ್ಳೆಯ ಕಡೆ ಉದ್ಯೋಗ ಮಾಡಿಕೊಂಡಿದ್ದಳು. ಈತನ ಕಾಟಕ್ಕೆ ಹುಡುಗಿ ಹಾಗೂ ಆಕೆಯ ಪೋಷಕರು ಸಹ ವಿರೋಧ ವ್ಯಕ್ತಪಡಿಸಿದ್ದರು. ಆದರೂ ಮಲ್ಲೇಶ್ ಪೀಡಿಸುತ್ತಿದ್ದ. ಇದರಿಂದ ಬೇಸತ್ತ ಹುಡುಗಿ ಕಳೆದ 2 ವರ್ಷಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಪ್ರಕರಣದಲ್ಲಿ ಮಲ್ಲೇಶ್ ವಿರುದ್ದ 306 ಪ್ರಕರಣ ದಾಖಲಾಗಿತ್ತು. ನಂತರ ಆತ ಜಾಮೀನಿನ ಮೇಲೆ ಹೊರಗೆ ಬಂದಿದ್ದ.
ಮಲ್ಲೇಶ್ನನ್ನು ಮುಗಿಸಬೇಕೆಂದು ಹುಡುಗಿಯ ತಮ್ಮ, ಆಕೆಯ ಚಿಕ್ಕಪ್ಪ ಸಾಕಷ್ಟು ಸ್ಕೇಚ್ ಹಾಕಿದ್ದರು. ಈ ಹಿಂದೆ ಸಾಕಷ್ಟು ಸಲ ಕೊಲೆಗೆ ಯತ್ನ ಮಾಡಿದ್ದರೂ ಅದು ವಿಫಲವಾಗಿತ್ತು. ಮಲ್ಲೇಶ್ ಬೆಂಗಳೂರಿನಲ್ಲಿ ಇರುತ್ತಾನೆ. ಹಬ್ಬಕ್ಕಾಗಿ ಬಂದ ಮಲ್ಲೇಶ್ನನ್ನು ಕೊಲೆ ಮಾಡಲು ಸ್ಕೇಚ್ ಹಾಕಿರುತ್ತಾರೆ. ನಿನ್ನೆ ಮಲ್ಲೇಶನನ್ನು ಕೊಲೆ ಮಾಡುವ ಮೂಲಕ ಪ್ರತೀಕಾರ ತೀರಿಸಿಕೊಂಡಿದ್ದಾರೆ. ನಿನ್ನೆಯ ಕೊಲೆಯಲ್ಲಿ ಮಾಹಿತಿದಾರ ಸೇರಿ ಒಟ್ಟು 7 ಜನ ಭಾಗಿಯಾಗಿದ್ದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಶಿವಮೊಗ್ಗ: ಬಾಕ್ಸ್ನಲ್ಲಿ ಉಪ್ಪು ತುಂಬಿ ಹಣವಿದೆ ಎಂದು ವಂಚಿಸಲು ಯತ್ನ- ಎಸ್ಪಿ