ಶಿವಮೊಗ್ಗ: ಮಾಹಿತಿ ಮತ್ತು ತಂತ್ರಜ್ಞಾನ ಹಾಗೂ ಸಾಮಾಜಿಕ ಜಾಲತಾಣವನ್ನು ಒಳ್ಳೆಯದಕ್ಕೆ ಹೇಗೆ ಬಳಸಿಕೊಳ್ಳಬಹುದು ಎಂಬುದಕ್ಕೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತುಮರಿ ಬಳಿಯ ದಾರಿಗದ್ದೆಯ ಮಹಿಳೆಯ ಕಥೆ ಸಾಕ್ಷಿಯಾಗಿದೆ.
ಶರಾವತಿ ಹಿನ್ನೀರಿನ ಪ್ರದೇಶವಾದ ದಾರಿಗದ್ದೆಯ ವಿಜಯ ಜೈನ್ ಎಂಬ ಅತಿಥಿ ಶಿಕ್ಷಕಿಗೆ ಕಳೆದ ಎರಡು ವರ್ಷಗಳಿಂದ ಕಿಡ್ನಿ ಸಮಸ್ಯೆ ಪ್ರಾರಂಭವಾಗಿತ್ತು. ಅವರು ಬದುಕಲು ಕಿಡ್ನಿ ಬದಲಾವಣೆ ಅನಿವಾರ್ಯ ಹಾಗೂ ಇದಕ್ಕೆ 15 ಲಕ್ಷ ರೂ. ಹಣ ಖರ್ಚಾಗುತ್ತದೆ ಎಂದು ವೈದ್ಯರು ತಿಳಿಸಿದ್ದರು.
ಆದರೆ, ಬಡತನವನ್ನೇ ಹೊದ್ದು ಮಲಗಿದ್ದ ವಿಜಯ ಜೈನ್ ಅವರಿಗೆ ಇಷ್ಟೊಂದು ಹಣ ಸಂಗ್ರಹ ಕಷ್ಟಕರವಾಗಿತ್ತು. ಆಗ ಇವರ ನೆರವಿಗೆ ಬಂದಿದ್ದು ತುಮರಿ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷ ಜಿ.ಟಿ.ಸತ್ಯನಾರಾಯಣ ಕರೂರು. ಇವರು ತಮ್ಮ ಫೇಸ್ಬುಕ್ ಹಾಗೂ ವಾಟ್ಸ್ಆ್ಯಪ್ಗಳಲ್ಲಿ ವಿಜಯ್ ಆಪರೇಷನ್ ಕುರಿತು ಪೋಸ್ಟ್ ಮಾಡಿದ್ದರು.
ಅಂತೆಯೇ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ ಕೇವಲ 15 ದಿನದಲ್ಲಿ 18 ಲಕ್ಷ ರೂ. ಸಂಗ್ರಹವಾಗಿತ್ತು. ಈ ಹಣವನ್ನು ವಿಜಯ ಜೈನ್ ಅವರ ಕಿಡ್ನಿ ಬದಲಾವಣೆಗೆ ಬಳಸಲು ನೀಡಲಾಗಿದೆ. ಮಣಿಪಾಲದ ಆಸ್ಪತ್ರೆಯಲ್ಲಿ ಆಪರೇಷನ್ ನಡೆದಿದೆ.
ವಿಜಯ ಜೈನ್ ಅವರಿಗೆ ಅವರ ತಾಯಿಯೇ ಕಿಡ್ನಿ ನೀಡಿದ್ದು ವಿಶೇಷವಾಗಿದೆ. ಈ ಮೂಲಕ ತಾಯಿಗೆ ಮಗಳ ಜೀವ ಉಳಿಸಿಕೊಂಡಂತೆಯೂ ಆಗಿದ್ದು, ಸದ್ಯ ತಾಯಿ-ಮಗಳು ಇಬ್ಬರೂ ಆರೋಗ್ಯವಾಗಿದ್ದಾರೆ.
ಇದನ್ನೂ ಓದಿ: ಸಂಕಟದಲ್ಲಿ ಸಂಜೀವಿನಿಯಾದ ಸೋಶಿಯಲ್ ಮೀಡಿಯಾ: ಶಿಶುವಿಗೆ ಎದೆಹಾಲು ಕೊರತೆ ನೀಗಿಸಿದ ಅಮ್ಮಂದಿರು!