ಶಿವಮೊಗ್ಗ : ಸಿಮ್ಸ್ ಎದುರುಗಡೆ ನಡೆಯುತ್ತಿರುವ ಹೊರಗುತ್ತಿಗೆ ನೌಕರರ ಪ್ರತಿಭಟನೆಯ ಬೇಡಿಕೆಗಳು ಈಡೇರದಿದ್ದರೆ ರಕ್ತಕ್ರಾಂತಿ ಚಳವಳಿ ನಡೆಸಲು ವಿದ್ಯಾರ್ಥಿ ಸಂಘಟನೆ ತೀರ್ಮಾನಿಸಿದೆ ಎಂದು ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ವಿನಯ್ ರಾಜಾವತ್ ತಿಳಿಸಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಸಮಾನ ಕೆಲಸಕ್ಕೆ ಸಮಾನ ವೇತನ ಹಾಗೂ ಹೊರ ಗುತ್ತಿಗೆ ರದ್ದುಪಡಿಸಿ ಒಳ ಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ನಿಯೋಜನೆ ಮಾಡುವ ಕುರಿತು ವಿಧಾನಸಭಾ ಅಧಿವೇಶನದಲ್ಲಿ ಆದೇಶ ಹೊರಡಿಸದೇ ಹೋದರೆ ರಕ್ತಕ್ರಾಂತಿ ನಡೆಸಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಕಳೆದ ನಾಲ್ಕು ದಿನಗಳಿಂದ ಸಿಮ್ಸ್ನ ಹೊರ ಗುತ್ತಿಗೆ ನೌಕರರು ತಮ್ಮ ಬೇಡಿಕೆ ಈಡೇರಿಕೆಗಾಗಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಇಲ್ಲಿಯವರೆಗೂ ಅವರ ಸಮಸ್ಯೆಗಳನ್ನು ಆಲಿಸಲು ಯಾರೊಬ್ಬರೂ ಸಹ ಬಂದಿಲ್ಲ. ಕಳೆದ ಕೆಲ ತಿಂಗಳ ಹಿಂದೆ ಪ್ರತಿಭಟನೆ ನಡೆಸಿದಾಗ ಸಂಸದ ಬಿ.ವೈ ರಾಘವೇಂದ್ರ ಬೇಡಿಕೆಗಳನ್ನು ಈಡೆರಿಸುವ ಭರವಸೆ ನೀಡಿದ್ದರು. ಆದರೆ, ಕೇವಲ ಸುಳ್ಳು ಭರವಸೆಗಳಾಗಿವೇ ಹೊರತು ಇಲ್ಲಿಯ ವರೆಗೂ ಯಾವುದೇ ಬೇಡಿಕೆ ಈಡೆರಿಲ್ಲ ಎಂದರು.
ಹೀಗಾಗಿ ಅಧಿವೇಶನದಲ್ಲಿ ಬೇಡಿಕೆ ಈಡೆರದೇ ಹೋದಲ್ಲಿ ಶನಿವಾರ ನಡೆಯುವ ಅನಾಹುತಗಳಿಗೆ ಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಂಸದರು ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕೊರೊನಾ ವಾರಿಯರ್ಸ್ಗಳಾಗಿ ಸೇವೆ ಸಲ್ಲಿಸಿದ ಕಾರ್ಮಿಕರಿಗೆ ಕೇವಲ 10.800 ರೂ.ಗಳಿಗೆ ಹೊರ ಗುತ್ತಿಗೆಯ ಆಧಾರದಲ್ಲಿ ದುಡಿಸಿಕೊಳ್ಳಲಾಗುತ್ತಿದೆ. ಹೀಗಾಗಿ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಹಾಗೂ ವಿವಿಧ ಬೇಡಿಕೆಗಳನ್ನು ಕೂಡಲೇ ಈಡೆರಿಸಬೇಕು ಎಂದರು. ಅಲ್ಲದೇ ಉಪವಾಸ ಸತ್ಯಾಗ್ರಹದ ಐದನೇ ದಿನವಾದ ನಾಳೆ ರಕ್ತಕ್ರಾಂತಿಯ ಮೂಲಕ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.