ಶಿವಮೊಗ್ಗ: ಮಹಾಮಾರಿ ಕೋವಿಡ್ ಇರುವ ಹಿನ್ನೆಲೆ ಈ ಬಾರಿ ಶಿವಮೊಗ್ಗ ದಸರಾ ಹಬ್ಬವನ್ನು ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ.
ಹಾಗಾಗಿ ಮಹಾನಗರ ಪಾಲಿಕೆ ಸೇಫ್ ಲಾಕರ್ನಲ್ಲಿದ್ದ ಬೆಳ್ಳಿ ಮೂರ್ತಿಯ ಅಂಬಾರಿಯನ್ನು ಹಾಗೂ ನಾಡದೇವತೆಯ ಬೆಳ್ಳಿ ಮೂರ್ತಿಯನ್ನು ಹೊರ ತೆಗೆದು ಪೂಜೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಸಾಲಿನ ದಸರಾದಲ್ಲಿ ಮೆರವಣಿಗೆ ಇಲ್ಲದಿರುವುದರಿಂದ ಮನೆಯಿಂದಲೇ ಸರಳ ದಸರಾ ಉತ್ಸವ ವೀಕ್ಷಿಸಲು ಮಹಾನಗರ ಪಾಲಿಕೆಯಿಂದ ವಿದ್ಯುನ್ಮಾನ ಉಪಕರಣಗಳ ಮೂಲಕ ವ್ಯವಸ್ಥೆ ಮಾಡಲಾಗಿದೆ.
ನಾಳೆಯಿಂದ ದಸರಾ ಪ್ರಾರಂಭವಾಗಲಿದ್ದು, ನಾಳೆ ಬೆಳಗ್ಗೆ 8-30ಕ್ಕೆ ದಸರಾ ಪೂಜಾ ಕಾರ್ಯಕ್ರಮ ಮಹಾನಗರ ಪಾಲಿಕೆ ಆವರಣದಲ್ಲಿ ನೆರವೇರಲಿದೆ. ನಂತರ 11 ಗಂಟೆಗೆ ನಗರದ ಕೋಟೆ ಶ್ರೀ ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಶಿವಮೊಗ್ಗ ದಸರಾ ಮಹೋತ್ಸವ ಉದ್ಘಾಟನಾ ಕಾರ್ಯಕ್ರಮವನ್ನು ಕೊರೊನಾ ವಾರಿಯರ್ಸ್‌ಗಳು ಉದ್ಘಾಟನೆ ಮಾಡಲಿದ್ದಾರೆ. ಈ ಬಾರಿ ದಸರಾ ಹಬ್ಬಕ್ಕೆ ನೂರು ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ.