ಶಿವಮೊಗ್ಗ: ಜನರ ಜೀವನ ಮಟ್ಟ ಅರಿಯಲು ಹಾಗೂ ಪಾಲಿಕೆ ಎಷ್ಟರ ಮಟ್ಟಿಗೆ ನಾಗರಿಕ ಸೇವೆ ನೀಡುತ್ತಿದೆ ಎಂಬುದನ್ನು ತಿಳಿಯಲು ಫೆ.1ರಿಂದ ಒಂದು ತಿಂಗಳ ಕಾಲ ನಗರದ ಸರ್ವೇ ನಡೆಯಲಿದೆ ಎಂದು ಶಿವಮೊಗ್ಗ ಸ್ಮಾರ್ಟ್ ಸಿಟಿಯ ಎಂ.ಡಿ. ಚಿದಾನಂದ ವಾಟರೆ ತಿಳಿಸಿದ್ದಾರೆ.
ಸ್ಮಾರ್ಟ್ ಸಿಟಿ ಕಚೇರಿಯಲ್ಲಿ ಮಾತನಾಡಿದ ಅವರು, ಕೇಂದ್ರದ ನಗರಾಭಿವೃದ್ದಿ ಇಲಾಖೆಯ ಆದೇಶದ ಮೇರೆಗೆ ಸರ್ವೇ ಪ್ರಾರಂಭ ಮಾಡಲಾಗಿದೆ. ನಗರದ ಜನರ ಜೀವನ ಮಟ್ಟ ಹಾಗೂ ಪಾಲಿಕೆ ಜನರಿಗೆ ಎಷ್ಟರ ಮಟ್ಟಿಗೆ ಸೌಲಭ್ಯ ಒದಗಿಸಿದೆ ಎಂಬುದನ್ನು ಅರಿಯಲು ಆನ್ಲೈನ್ ಹಾಗೂ ಆಫ್ಲೈನ್ ಸರ್ವೇ ಪ್ರಾರಂಭಿಸಲಾಗಿದೆ. ಸರ್ವೇಯಲ್ಲಿ ಪ್ರಶ್ನಾವಳಿಗಳ ಮೂಲಕ ಮಾಹಿತಿ ಸಂಗ್ರಹಿಸಲಾಗುತ್ತದೆ. ಸರ್ವೇ ಕಾರ್ಯ ಫೆಬ್ರವರಿ ತಿಂಗಳ ಅಂತ್ಯದವರೆಗೆ ನಡೆಯಲಿದೆ ಎಂದರು.
ಸರ್ವೇಯಲ್ಲಿ ಆರೋಗ್ಯ, ಶಿಕ್ಷಣ, ಭದ್ರತೆ ಸೇರಿದಂತೆ 20 ಪ್ರಶ್ನೆಗಳು ಇರಲಿವೆ. ಈ ಸರ್ವೇಯ ಮೂಲಕ ಕೇಂದ್ರ ಸರ್ಕಾರವು ಜನರ ಜೀವನ ಮಟ್ಟ ಅರಿತು ಅದಕ್ಕೆ ಬೇಕಾದ ಯೋಜನೆಗಳನ್ನು ರೂಪಿಸಲು ಸಹಾಯಕವಾಗುತ್ತದೆ ಎಂದು ತಿಳಿಸಿದರು. ಈ ವೇಳೆ ಸ್ಮಾರ್ಟ್ ಸಿಟಿಯ ಶಿವಕುಮಾರ್ ಸೇರಿ ಇತರರು ಹಾಜರಿದ್ದರು.