ಶಿವಮೊಗ್ಗ: ಮಲೆನಾಡಿನಲ್ಲಿ ಹಳ್ಳ, ತೊರೆ, ನದಿಗಳು ಸಾಮಾನ್ಯ. ಇವುಗಳು ಮಳೆಗಾಲದಲ್ಲಿ ಮೈದುಂಬಿ ಹರಿಯುತ್ತವೆ. ಇವುಗಳನ್ನು ದಾಟಲು ಸ್ಥಳೀಯರು ಕಾಲು ಸಂಕಗಳನ್ನು ನಿರ್ಮಾಣ ಮಾಡಿಕೊಳ್ಳುತ್ತಿದ್ದರು. ಕಾಲು ಸಂಕಗಳು ಕೇವಲ ನಡೆದಾಡಲು ಮಾತ್ರವೇ ಅನುಕೂಲಕರವಾಗಿತ್ತು. ಈಗಲೂ ಅನೇಕ ಕಡೆಗಳಲ್ಲಿ ಸ್ಥಳೀಯರು ಈ ಕಾಲುಸಂಕಗಳನ್ನೇ ಬಳಸಿಕೊಳ್ಳುತ್ತಿದ್ದಾರೆ.
ಇನ್ನು ಕೆಲವೆಡೆ ಆಧುನಿಕತೆ ಬೆಳೆದಂತೆ ತೂಗು ಸೇತುವೆಗಳು ಬಳಕೆಗೆ ಬಂದಿವೆ. ಅದರಂತೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಸೌಳಿ ಗ್ರಾಮದಲ್ಲಿ ತುಂಗಾ ನದಿಯ ಉಪ ನದಿಯಾದ ಮಾಲತಿ ನದಿಗೆ ತೂಗು ಸೇತುವೆ ನಿರ್ಮಾಣ ಮಾಡಲಾಗಿದೆ. 2007ರಲ್ಲಿ ನಿರ್ಮಾಣವಾದ ತೂಗು ಸೇತುವೆ ಇಂದು ಸೂಕ್ತ ನಿರ್ವಹಣೆ ಇಲ್ಲದೇ, ಬಿದ್ದು ಹೋಗುವ ದುಸ್ಥಿತಿಯಲ್ಲಿದೆ.
ಸೌಳಿ ಹಾಗೂ ಭೀಮನಕಟ್ಟೆ ಗ್ರಾಮಗಳ ಸಂಪರ್ಕ ಸೇತುವಾದ ತೂಗು ಸೇತುವೆ 2007ರಲ್ಲಿ ಕುಮಾರಸ್ವಾಮಿ ಸಿಎಂ, ಯಡಿಯೂರಪ್ಪ ಡಿಸಿಎಂ ಆಗಿದ್ದ ಸಮಯದಲ್ಲಿ ನಿರ್ಮಾಣವಾಗಿತ್ತು. ಇದಕ್ಕೆಂದು 25 ಲಕ್ಷ ರೂ. ಅನುದಾನವನ್ನು ಮಲೆನಾಡು ಅಭಿವೃದ್ಧಿ ಪ್ರಾಧಿಕಾರದಿಂದ ನೀಡಲಾಗಿತ್ತು.
ತೂಗು ಸೇತುವೆಯು ಹೆಗ್ಗೂಡು ಹಾಗೂ ಮುಳಬಾಗಿಲು ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳ ಕೊಂಡಿಯಾಗಿದೆ. ಸೇತುವೆಯಿಂದ ಈ ಭಾಗದ ಜನರಿಗೆ ತೀರ್ಥಹಳ್ಳಿ ತುಂಬಾ ಹತ್ತಿರವಾಗುತ್ತದೆ. ಹೆಗ್ಗೂಡು ಗ್ರಾಮ ಪಂಚಾಯತಿ ಭಾಗದವರಿಗೆ ಈ ಸೇತುವೆ ಇಲ್ಲದೇ ಹೋದ್ರೆ, ತೀರ್ಥಹಳ್ಳಿ ಪಟ್ಟಣ ತಲುಪಲು 15 ಕಿ.ಮೀ. ದೂರ ಸಾಗಿ, ಶೃಂಗೇರಿ ರಸ್ತೆಯಿಂದ ತೀರ್ಥಹಳ್ಳಿ ಭಾಗಕ್ಕೆ ಬರಬೇಕು. ಅದೇ ಮುಳಬಾಗಿಲು ಗ್ರಾಮ ಪಂಚಾಯತಿಯ ಸೌಳಿ ಭಾಗಕ್ಕೆ ಬಂದ್ರೆ, ತೀರ್ಥಹಳ್ಳಿಗೆ ಕೇವಲ 5 ಕಿ.ಮೀನಲ್ಲಿಯೇ ತಲುಪಬಹುದು.
ಭೀಮನಕಟ್ಟೆ ಹಾಗೂ ಸೌಳಿ ತೂಗು ಸೇತುವೆ ಈಗ ಬಿದ್ದು ಹೋಗುವ ಹಂತ ತಲುಪಿದೆ. ಇದರ ಮೇಲೆ ಸಂಚಾರ ಮಾಡಲು ಗ್ರಾಮಸ್ಥರು ಹೆದರುತ್ತಿದ್ದಾರೆ. ಸೇತುವೆಯನ್ನು ಕಬ್ಬಿಣದಿಂದ ನಿರ್ಮಾಣ ಮಾಡಲಾಗಿದ್ದು, ಮಲೆನಾಡಿನ ಮಳೆಗೆ ಕಬ್ಬಿಣ ತುಕ್ಕು ಹಿಡಿದಿದೆ. ಹೀಗಾಗಿ, ಸೇತುವೆಯ ದುರಸ್ತಿ ಕಾರ್ಯ ತುರ್ತಾಗಿ ಆಗಬೇಕಿದೆ ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.
ಕಳೆದ 17 ವರ್ಷಗಳಲ್ಲಿ ಒಮ್ಮೆ, ಅಂದರೆ 2015ರಲ್ಲಿ ಕಿಮ್ಮನೆ ರತ್ನಾಕರ್ ಅವರು ಶಿಕ್ಷಣ ಮಂತ್ರಿಯಾಗಿದ್ದಾಗ ಸೇತುವೆ ನಿರ್ವಹಣೆ ಮಾಡಲಾಗಿತ್ತು. ಅಂದು ನಿರ್ವಹಣೆಗೆ 15 ಲಕ್ಷ ರೂ. ಖರ್ಚಾಗಿತ್ತು. ಈಗ ಮತ್ತೆ ಇದರ ದುರಸ್ತಿ ಮಾಡಬೇಕಿದೆ. ಹಿಂದೆ ತೂಗು ಸೇತುವೆ ನಿರ್ಮಿಸಿದ ಸಂಸ್ಥೆಯವರು ಇತ್ತೀಚೆಗೆ ಬಂದು ನೋಡಿ ಇದರ ನಿರ್ವಹಣೆಗೆ ಸುಮಾರು 20 ಲಕ್ಷ ರೂ. ಬೇಕೆಂದು ಅಂದಾಜು ಪಟ್ಟಿ ನೀಡಿದ್ದಾರೆ.
ತೂಗು ಸೇತುವೆ ನಿರ್ಮಾಣ ಮಾಡಿ 17 ವರ್ಷ ಕಳೆದಿದೆ. ಇದರ ನಿರ್ಮಾಣಕ್ಕೆ ಮಲೆನಾಡು ಅಭಿವೃದ್ದಿ ಪ್ರಾಧಿಕಾರದವರು 25 ಲಕ್ಷ ರೂ. ನೀಡಿದ್ದರು. 2015ರಲ್ಲಿ ಒಮ್ಮೆ ನಿರ್ವಹಣೆಯಾಗಿದೆ. ನಂತರ ಇದರತ್ತ ಯಾರೂ ತಿರುಗಿ ನೋಡಿಲ್ಲ. ಇದರಿಂದ ಸೇತುವೆ ಶಿಥಿಲಾವಸ್ಥೆ ತಲುಪಿದೆ. ನಿರ್ಮಾಣವಾದ ನಂತರ ಸೇತುವೆಯನ್ನು ಯಾರು ನಿರ್ವಹಣೆ ಮಾಡಬೇಕೆಂದು ಯಾರಿಗೂ ತಿಳಿದಿಲ್ಲ. ಇದು ಎರಡು ಗ್ರಾಮ ಪಂಚಾಯತಿಗಳ ನಡುವೆ ಇದೆ.
"ಸೇತುವೆಯನ್ನು ಗ್ರಾಮ ಪಂಚಾಯತಿಗಳು ನಿರ್ವಹಣೆ ಮಾಡಬೇಕೇ ಅಥವಾ ತಾಲೂಕು ಪಂಚಾಯತಿಯೇ ಅಥವಾ ಜಿಲ್ಲಾಡಳಿತವೇ? ಎಂಬುದೇ ತಿಳಿದಿಲ್ಲ. ಸೇತುವೆ ಆಗೋ ಇಗೋ ಬಿದ್ದು ಹೋಗುವ ಸ್ಥಿತಿಯಲ್ಲಿದೆ. ತೂಗು ಸೇತುವೆಯಾದ ಕಾರಣ ಇದರ ನಟ್, ಬೋಲ್ಟ್ಗಳು ಜೋಡಣೆ ಮಾಡಿದ ಕಬ್ಬಿಣದ ತುಂಡುಗಳು ಸೇರಿದಂತೆ ತೂಗು ಸೇತುವೆಗೆ ಹಾಕಿದ ಕಬ್ಬಿಣದ ರಾಡುಗಳು ತುಕ್ಕು ಹಿಡಿದಿವೆ. ಸೌಳಿ- ಭೀಮನಕಟ್ಟೆ ಸೇತುವೆ ಮಾಡಿ ಎಂದು ಹಲವು ವರ್ಷಗಳ ಹೋರಾಟದ ಫಲವಾಗಿ ತೂಗು ಸೇತುವೆ ನಿರ್ಮಾಣ ಮಾಡಲಾಯಿತು. ಆದರೆ ನಿರ್ಮಾಣವಾಗಿ ಒಮ್ಮೆ ಮಾತ್ರ ರಿಪೇರಿ ಮಾಡಲಾಗಿದೆ. ನಮ್ಮ ಗ್ರಾಮಗಳ ಸಂಪರ್ಕದ ತೂಗು ಸೇತುವೆಯನ್ನು ಸಂಚಾರಕ್ಕೆ ಅನುವು ಮಾಡಿಕೊಡಬೇಕಿದೆ" ಎಂದು ಸೌಳಿ ಗ್ರಾಮದ ನಾಗರಾಜ್ ಒತ್ತಾಯಿಸಿದರು.
ಗ್ರಾಮಸ್ಥರು ಹೇಳುವುದೇನು?: "ಗ್ರಾಮ ಪಂಚಾಯತಿಗಳು ನಿರ್ವಹಣೆ ಮಾಡಲು ಇಷ್ಟೊಂದು ಹಣ ಅವರ ಬಳಿ ಇಲ್ಲ. ಇದರಿಂದ ಅದಷ್ಟು ಬೇಗ ಇದರ ನಿರ್ವಹಣೆ ಮಾಡಬೇಕು. ಇಲ್ಲವಾದಲ್ಲಿ ಬಿದ್ದು ಹೋಗಬಹುದು. ಕೆಲ ದಿನಗಳ ಹಿಂದಷ್ಟೇ ಸೇತುವೆ ಬಳಿ ಸಂಸದ ಬಿ. ವೈ. ರಾಘವೇಂದ್ರ ಹಾಗೂ ಶಾಸಕ ಆರಗ ಜ್ಞಾನೇಂದ್ರ ಅವರು ಭೇಟಿ ನೀಡಿದಾಗ ಸೇತುವೆ ನಿರ್ಮಾಣ ಮಾಡಿಸಬೇಕು ಎಂದು ಸ್ಥಳೀಯರು, ಗ್ರಾಮ ಪಂಚಾಯತಿ ಸದಸ್ಯರು ಸೇರಿ ಮನವಿ ಸಲ್ಲಿಸಲಾಗಿದೆ" ಎಂದು ಮುಳಬಾಗಿಲು ಗ್ರಾಮ ಪಂಚಾಯತಿ ಸದಸ್ಯ ಪ್ರದೀಪ್ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.