ಶಿವಮೊಗ್ಗ: ಇಡೀ ದೇಶದಲ್ಲೇ ಪ್ರಪ್ರಥಮ ಬಾರಿಗೆ ಜಿಲ್ಲೆಯ ಅರಣ್ಯ ಇಲಾಖೆ ಅಧಿಕಾರಿಗಳು ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಅರಣ್ಯ ಒತ್ತುವರಿ ತಡೆಯಲು ಅರಣ್ಯಾಧಿಕಾರಿಗಳು ಉಪಗ್ರಹದ ಮೊರೆ ಹೋಗಿದ್ದು, ಈ ಮೂಲಕ ಒತ್ತುವರಿಗೆ ಕಡಿವಾಣ ಹಾಕಲು ಮುಂದಾಗಿದ್ದಾರೆ.
ಅರಣ್ಯ ಒತ್ತುವರಿದಾರರ ವಿರುದ್ಧ ಈಗಾಗಲೇ ನೂರಾರು ಪ್ರಕರಣಗಳು ದಾಖಲಾಗಿದ್ದು, ಕರ್ನಾಟಕ ದೂರ ಸಂವೇದಿ ಅನ್ವಯಿಕ ಕೇಂದ್ರದ ಸಹಾಯದೊಂದಿಗೆ ಕಡಿವಾಣಕ್ಕೆ ಮುಂದಾಗಿದೆ. ಒಂದೆಡೆ ಇದರಿಂದ ಅಧಿಕಾರಿಗಳ ಜವಾಬ್ದಾರಿಯೂ ಹೆಚ್ಚಾಗಿದ್ದು, ಮತ್ತೊಂದೆಡೆ, ಇನ್ಮುಂದೆ ಒತ್ತುವರಿ ಮಾಡಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲದಂತಾಗಿದೆ. ಈ ಮೂಲಕ ಒತ್ತುವರಿದಾರರಿಗೆ, ಅರಣ್ಯಾಧಿಕಾರಿಗಳು ಡಿಜಿಟಲ್ ಚಾಟಿ ಬೀಸಿದ್ದಾರೆ.
ಕಳೆದ ಹಲವು ವರ್ಷಗಳಿಂದ ರಾಜ್ಯದಲ್ಲಿ ಅರಣ್ಯ ಒತ್ತುವರಿ ಪ್ರಕರಣಗಳು ಜಾಸ್ತಿಯಾಗುತ್ತಿವೆ. 50 ವರ್ಷದಿಂದ ಈಚೆಗೆ ಬಗರ್‌ಹುಕುಂ, ಒತ್ತುವರಿ ಹೆಸರಿನಲ್ಲಿ ಲಕ್ಷಾಂತರ ಹೆಕ್ಟೇರ್ ಅರಣ್ಯ ನಾಶವಾಗಿದೆ. ಇದಕ್ಕೆಲ್ಲ ಕಡಿವಾಣ ಹಾಕಲು, ಅರಣ್ಯ ಇಲಾಖೆ ಉಪಗ್ರಹದ ಮೊರೆ ಹೋಗಿದೆ. ಕರ್ನಾಟಕ ದೂರ ಸಂವೇದಿ ಅನ್ವಯಿಕ ಕೇಂದ್ರ (ಕೆಎಸ್‌ಆರ್‌ಎಸ್‌ಎಸಿ)ದಿಂದ ಉಪಗ್ರಹ ಚಿತ್ರ ಆಧಾರಿತ ಅರಣ್ಯ ಭೂಮಿ ನಕಾಶೆ ಸಿದ್ಧಪಡಿಸಿದ್ದು, ಇದು ಅರಣ್ಯ ಭೂಮಿಯೊಳಗೆ ಯಾವುದೇ ಬದಲಾವಣೆಗಳು ಕಂಡು ಬಂದರೆ, ಸ್ಥಳೀಯವಾಗಿ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡುತ್ತದೆ.
ಮಾಹಿತಿ ಆಧಾರದ ಮೇಲೆ ಅರಣ್ಯಾಧಿಕಾರಿಗಳು ಸ್ಥಳ ಭೇಟಿ ಮಾಡಿ ವರದಿ ಸಲ್ಲಿಸುವುದು ಕಡ್ಡಾಯವಾಗಿದ್ದು, ಈಗಾಗಲೇ, ಕಾರ್ಯಾಚರಣೆ ಆರಂಭವಾಗಿದೆ. ಅಲ್ಲದೇ, ಒತ್ತುವರಿದಾರರ ವಿರುದ್ಧ ನೂರಾರು ದೂರು ದಾಖಲಾಗಿವೆ. ಪ್ರತಿ 21 ದಿನಗಳಿಗೊಮ್ಮೆ ಉಪಗ್ರಹ ಆಧಾರಿತ ಚಿತ್ರಗಳು ರವಾನೆಯಾಗಲಿದ್ದು, 10 / 10 ಮೀ. ವ್ಯಾಪ್ತಿವರೆಗೂ, ಉಪಗ್ರಹ ಸ್ಕ್ಯಾನ್ ಮಾಡುತ್ತದೆ. 21 ದಿನಗಳ ಅಂತರದಲ್ಲಿ ಯಾವುದೇ ಬದಲಾವಣೆ ಕಂಡುಬಂದರೆ ಆ ಪ್ರದೇಶವನ್ನು ಮಾರ್ಕ್ ಮಾಡಿ ಅರಣ್ಯಾಧಿಕಾರಿಗಳಿಗೆ ಸರ್ವೇ ನಂಬರ್ ಸಮೇತ ಫೋಟೋ ಆಧಾರಿತ ಮೆಸೇಜ್ ಅರಣ್ಯಾಧಿಕಾರಿಗಳ ಮೊಬೈಲ್‌ಗೆ ರವಾನೆಯಾಗಲಿದೆ.
ಇದನ್ನೂ ಓದಿ: ಅಕ್ರಮ ಅದಿರು ಸಾಗಣೆ: ಲಂಚ ಆರೋಪದಿಂದ 24 ಅಧಿಕಾರಿಗಳನ್ನು ಮುಕ್ತಗೊಳಿಸಿದ ಸರ್ಕಾರ
ಇನ್ನು ಮುಂದಿನ ದಿನಗಳಲ್ಲಿ ಇನ್ನೂ ಹತ್ತಿರದ ಬದಲಾವಣೆಗಳನ್ನು ಗಮನಿಸುವ ಸಾಧ್ಯತೆ ಇದ್ದು, ಈಗಾಗಲೇ, ನೂರಾರು ವರ್ಷಗಳಿಂದ ಇರುವ ಅರಣ್ಯ ಭೂಮಿ ದಾಖಲೆಗಳ ಆಧಾರದ ಮೇಲೆ ಗಡಿಯನ್ನು ಗುರುತಿಸಲಾಗಿದೆ. ಶೇ. 80 ರಷ್ಟು ದಾಖಲೆಗಳು ಡಿಜಟಲೀಕರಣಗೊಳಿಸಲಾಗಿದೆ. ಈಗಾಗಲೇ, ಒತ್ತುವರಿ ಮಾಡಿರುವ ಜಮೀನು ಸಹ ಇದರಲ್ಲಿ ತಿಳಿಯಲಿದೆ.
ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ಹೊರತುಪಡಿಸಿ, ಹೊಸ ಒತ್ತುವರಿಯನ್ನು ತಡೆಯುವುದು ಈ ಯೋಜನೆಯ ಉದ್ದೇಶವಾಗಿದೆ. ಅದರಂತೆ, ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಅರಣ್ಯ ಪ್ರದೇಶ ಕಡಿಮೆಯಾಗುತ್ತಿದ್ದು, ಪಶ್ಚಿಮಘಟ್ಟ ಜಿಲ್ಲೆಗಳಲ್ಲಿ ಅರಣ್ಯ ಭೂಮಿ ಹೆಚ್ಚಾಗಿರುವುದು ಬಿಟ್ಟರೆ, ಉಳಿದ ಜಿಲ್ಲೆಗಳಲ್ಲಿ ಅತಿ ಕಡಿಮೆ ಇದೆ. ಈಗಿರುವ ಅರಣ್ಯ ಭೂಮಿಯಲ್ಲಿ ಹೊಸ ಚಟುವಟಿಕೆಗಳು, ಉಪಗ್ರಹದ ಮೂಲಕ ಕಂಡು ಬಂದರೆ, ಕ್ರಮ ಕೈಗೊಳ್ಳಲು ಅರಣ್ಯಾಧಿಕಾರಿಗಳು ನಿರ್ಧರಿಸಿದ್ದಾರೆ.
ಒಟ್ಟಿನಲ್ಲಿ, ಈಗಾಗಲೇ ಜಿಲ್ಲೆಯ ಅರಣ್ಯ ಇಲಾಖೆಗೆ, ಉಪಗ್ರಹದ ಮೂಲಕ 75 ಅಲರ್ಟ್ ಗಳು ಬಂದಿದ್ದು, ಇದರಲ್ಲಿ 15 ದೂರು ದಾಖಲಿಸಲಾಗಿದೆ. ಇತ್ತೀಚಿಗಷ್ಟೇ, ಅರಣ್ಯ ಪ್ರದೇಶದಲ್ಲಿ ಬೇರೆಡೆ ಇದ್ದ ಕಸ ತಂದು ಸುರಿದ್ದಿದ್ದ ಚಿತ್ರವೂ ಸಹ ರವಾನೆಯಾಗಿದ್ದು, ಇದು ಅರಣ್ಯ ಪ್ರದೇಶ ಉಳಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ. ಅದರಲ್ಲೂ ದೇಶದಲ್ಲೇ ಪ್ರಪ್ರಥಮವಾಗಿ ಶಿವಮೊಗ್ಗದಲ್ಲಿ ಈ ಯೋಜನೆ ಫಲಪ್ರದವಾಗಿರುವುದು ಸಂತಸದ ವಿಚಾರವಾಗಿದೆ. ಈ ಮೂಲಕ ಅರಣ್ಯ ಉಳಿಸಿ, ಬೆಳೆಸಲು ಅನುಕೂಲಕರವಾಗಿದೆ.