ಶಿವಮೊಗ್ಗ: ರಾಜ್ಯವನ್ನು ಈ ಬಾರಿ ಬರ ಕಾಡುತ್ತಿದೆ. ಮಳೆ ಇಲ್ಲದೆ ರೈತಾಪಿ ವರ್ಗ ಸಂಕಷ್ಟದಲ್ಲಿದೆ. ಬೆಳೆದ ಅಲ್ಪಸ್ವಲ್ಪ ಬೆಳೆಯನ್ನು ಕಾಪಾಡಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ಮಲೆನಾಡು ಹಾಗು ಅರಣ್ಯ ಗಡಿವ್ಯಾಪ್ತಿಯಲ್ಲಿರುವ ರೈತರು ಬೆಳೆ ರಕ್ಷಣೆಗಾಗಿ ಹಲವು ಉಪಾಯಗಳನ್ನು ಮಾಡುತ್ತಲೇ ಇರುತ್ತಾರೆ. ತೋಟದಲ್ಲಿ ಜನರಿದ್ದಾರೆ ಎಂದು ತೋರಿಸಲು ಬೆದರುಗೊಂಬೆಗಳು, ದೃಷ್ಟಿಯಾಗದೇ ಇರಲಿ ಎಂದು ದೃಷ್ಟಿಗೊಂಬೆಗಳನ್ನು ಅಳವಡಿಸುವುದೆಲ್ಲ ಸಹಜ.
ಹೀಗಿರಲು, ಇದೇ ಜಿಲ್ಲೆಯ ಮಳವಳ್ಳಿಯ ರೈತ ರಂಗಸ್ವಾಮಿ ಎಂಬವರು ತನ್ನ ಎರಡು ಎಕರೆಯಲ್ಲಿ ಬಾಳೆ ಕೃಷಿ ಮಾಡಿದ್ದಾರೆ. ಬೆಳೆ ನಳನಳಿಸುತ್ತಿದೆ. ಆದರೆ ತೋಟಕ್ಕೆ ದೃಷ್ಟಿಯಾದರೆ ಏನು ಗತಿ?. ಇದಕ್ಕಾಗಿ ಇವರಿಗೆ ಹೊಳೆದಿದ್ದೇ ಸುಂದರ ನಟಿಯರ ಚಿತ್ರ. ಹೌದು, ನಟಿಯರ ಫೋಟೋಗಳನ್ನು ತನ್ನ ತೋಟದಲ್ಲಿ ಕಟ್ಟಿ ಕುತೂಹಲ ಕೆರಳಿಸಿದ್ದಾರೆ.
ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಮಳವಳ್ಳಿ ಗ್ರಾಮದ ರಂಗನಾಥ ಅವರ ತೋಟದಲ್ಲಿ ನಟಿಯರ ಆಕರ್ಷಕ ಫೋಟೋ ನೋಡಿ ಸ್ಥಳೀಯ ಜನರು ಮುಸಿಮುಸಿ ನಗುತ್ತಿದ್ದಾರೆ. ಇದರ ಜೊತೆಗೆ, ಎಂಥಾ ಐಡಿಯಾ ಅಂತಲೂ ಹುಬ್ಬೇರಿಸುತ್ತಿದ್ದಾರಂತೆ.
ತೋಟದ ಸುತ್ತ ರಸ್ತೆ ಬದಿಯಲ್ಲಿ ಜನರಿಗೆ ಕಾಣುವಂತೆ ನಟಿಯರ ಫೋಟೋಗಳನ್ನು ಹಾಕಲಾಗಿದೆ. ಮಲೆನಾಡು ಭಾಗದಲ್ಲಿ ಸಾಮಾನ್ಯವಾಗಿ ತೋಟಗಳೆದುರು ದೇವರ ಫೋಟೋಗಳನ್ನು ಹಾಕಿರುತ್ತಾರೆ. ಇಲ್ಲವೇ ಬೇಲಿಗಳ ಪಕ್ಕದಲ್ಲಿ ಬೆದರು ಗೊಂಬೆ ಹಾಗೂ ದೃಷ್ಟಿ ಗೊಂಬೆಗಳನ್ನು ಕಟ್ಟಿರುತ್ತಾರೆ. ಆದರೆ ರಂಗಸ್ವಾಮಿ ಬೆಳೆ ಸಂರಕ್ಷಣೆಗೆ ವಿಭಿನ್ನ ಐಡಿಯಾ ಮಾಡಿರುವುದು ಗಮನ ಸೆಳೆಯುತ್ತಿದೆ.
ರಂಗನಾಥ್ ಮಾತನಾಡಿ, "ಹಲವು ಬಾರಿ ದೃಷ್ಟಿಗೊಂಬೆಗಳನ್ನಿಟ್ಟಿದ್ದೆ. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಹಾಗಾಗಿ ನಟಿಯರ ಫೋಟೋಗಳನ್ನು ದೃಷ್ಟಿ ಗೊಂಬೆಗಳ ಜಾಗದಲ್ಲಿ ಹಾಕಿದ್ದೀನಿ. ಈ ಫೋಟೋಗಳನ್ನು ಜನ ನೋಡಿಕೊಂಡು ಖುಷಿಯಿಂದ ಮುಂದೆ ಹೋಗುತ್ತಾರೆ. ಕೆಲವರು ರಾತ್ರಿ ವೇಳೆಯೂ ಈ ಫೋಟೋಗಳನ್ನು ನೋಡಲು ಇಲ್ಲಿಗೆ ಬರುತ್ತಾರೆ" ಎಂದು ನಕ್ಕರು.
ಇದನ್ನೂ ಓದಿ: ಬೆಳಗಾವಿ ಅಧಿವೇಶನ, ಅನ್ನದಾತರ ಬೇಡಿಕೆಗಳೇನು? ರೈತ ಸಂಘದ ಅಧ್ಯಕ್ಷರ ಸಂದರ್ಶನ