ಶಿವಮೊಗ್ಗ: ಸಾಗರದ ವನಶ್ರೀ ವಸತಿ ಶಾಲೆಯ 13 ವರ್ಷದ ವಿದ್ಯಾರ್ಥಿಯೋರ್ವಳು ದಿಢೀರ್ ಸಾವಿಗೀಡಾಗಿರುವ ಘಟನೆ ಸಾಗರ ಪಟ್ಟಣದಲ್ಲಿ ನಡೆದಿದೆ. ವಿದ್ಯಾರ್ಥಿನಿ ಶಾಲೆಯಲ್ಲಿ ದಿಢೀರ್ ಅಸ್ವಸ್ಥಳಾಗಿ ವಾಂತಿ ಮಾಡಿಕೊಂಡಿದ್ದಾರೆ. ಅಷ್ಟರಲ್ಲಿ ಶಾಲೆಯ ಶಿಕ್ಷಕರು ಆಕೆಯನ್ನು ಸಾಗರದ ಉಪ ವಿಭಾಗಿಯ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆಸ್ಪತ್ರೆಗೆ ಕರೆದುಕೊಂಡು ಬಂದ ತಕ್ಷಣ ವೈದ್ಯರು ಪರೀಕ್ಷಿಸಿ ಬಾಲಕಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ. ಘಟನೆಯ ಕುರಿತು ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಮೃತದೇಹವನ್ನು ಶಿವಮೊಗ್ಗಕ್ಕೆ ರವಾನೆ ಮಾಡಲಾಗಿದೆ.
ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಪೋಷಕರು: ಮೃತ ಬಾಲಕಿ ಸೊರಬ ತಾಲೂಕು ಶಿವಪುರ ಗ್ರಾಮದ ನಿವಾಸಿ. ಇವರ ತಂದೆ ಕೃಷಿಕರು. ಮಗಳಿಗೆ ಉತ್ತಮ ವಿದ್ಯಾಭ್ಯಾಸ ಸಿಗಲಿ ಎಂದು ಸಾಗರದ ಶಾಲೆಗೆ ಸೇರಿಸಿದ್ದರು. ವಸತಿ ಶಾಲೆಗೆ ಸೇರಿ ಕೇವಲ ಐದು ದಿನಗಳಾಗಿತ್ತು. ಮಗಳು ಶಾಲೆಗೆ ಹೋದ ಐದು ದಿನಕ್ಕೆ ಸಾವನ್ನಪ್ಪಿರುವುದು ಪೋಷಕರಿಗೆ ಸಿಡಿಲು ಬಡಿದಂತಾಗಿದೆ. ವಿದ್ಯಾರ್ಥಿನಿಗೆ ಹುಷಾರಿಲ್ಲ, ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದೇವೆ, ಸಾಗರ ಆಸ್ಪತ್ರೆಗೆ ಬನ್ನಿ ಎಂದು ನಮಗೆ ಹೇಳಿದರು. ಆಸ್ಪತ್ರೆಗೆ ಬಂದಾಗ ಮಗಳ ಸಾವಿನ ಸುದ್ದಿ ಕೇಳಿ ಆಕಾಶವೇ ಕಳಚಿ ಬಿದ್ದಂತಾಗಿದೆ. ನಮ್ಮ ಮಗಳು ಪ್ರಜ್ಞೆ ತಪ್ಪಿ ಬಿದ್ದಿರಬೇಕು, ಚಿಕಿತ್ಸೆ ನೀಡಿ ಬದುಕಿಸಿ ಎಂದು ತಾಯಿ ಕಣ್ಣೀರು ಹಾಕುತ್ತಿದ್ದ ದೃಶ್ಯ ಮನಕಲಕುವಂತಿತ್ತು.
ವಸತಿ ಶಾಲೆಯಲ್ಲಿ ಉಚಿತ ಶಿಕ್ಷಣ ಪಡೆಯಲು ಕಳೆದ ಐದು ದಿನಗಳ ಹಿಂದೆ ಈ ಬಾಲಕಿ ಸೇರ್ಪಡೆಯಾಗಿದ್ದರು. ನಿನ್ನೆ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಿದೆ. ರಾತ್ರಿ ಮಲಗಿದ್ದವರು ಬೆಳಗ್ಗೆ ಕೊಠಡಿಯಿಂದ ಹೊರ ಬಾರದ ಕಾರಣ ಹೋಗಿ ವಿಚಾರಿಸಿದ್ದಾರೆ. ಅಲ್ಲಿ ಹೋದಾಗ ವಾಂತಿ- ಭೇದಿ ಆಗಿರುವುದು ಗಮನಕ್ಕೆ ಬಂದಿದೆ. ವಿದ್ಯಾರ್ಥಿನಿ ಪ್ರಜ್ಞಾಹೀನಳಾಗಿದ್ದಳು. ತಕ್ಷಣವೇ ಸಾಗರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಲ್ಲಿ ವೈದ್ಯರು ಆಕೆ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.
ವನಶ್ರೀ ಶಾಲೆಯ ಮುಖ್ಯಸ್ಥ ಮಂಜಪ್ಪ ಮಾತನಾಡಿ, "ವಿದ್ಯಾರ್ಥಿನಿ ಐದು ದಿನಗಳ ಹಿಂದೆ ನಮ್ಮ ಶಾಲೆಗೆ ದಾಖಲಾಗಿದ್ದಳು. ನಿನ್ನೆ ಕಾಲು ನೋವೆಂದು ಹೇಳಿದ್ದಾಳೆ. ಅದಕ್ಕೆ ನಾವು ಜೆಲ್ ಎಣ್ಣೆ ಹಚ್ಚಿ, ಮೈಕೈ ನೋವಿಗೆ ಕೊಡುವಂತಹ ಮೆಣಸಿನಕಾಳು ಸಾರು ಕೊಟ್ಟಿದ್ದೇವೆ. ಅದನ್ನು ನಾನೂ ಕುಡಿದಿದ್ದೇನೆ. ಜೊತೆಗೆ ಇನ್ನೂ ನಾಲ್ಕು ಮಕ್ಕಳು ಸಾರು ಸೇವಿಸಿದ್ದಾರೆ. ರಾತ್ರಿ ಸಾಂಬರು ಅನ್ನ ಊಟ ಮಾಡಿದ್ದಾಳೆ. ಬೆಳಗ್ಗೆ ಎಲ್ಲರೂ ನೀರು ಕುಡಿಯಲು ಬರಬೇಕು, ಆದರೆ ಈ ಹುಡುಗಿ ನೀರು ಕುಡಿಯಲು ಬಂದಿಲ್ಲ. ಕೇಳಿದಾಗ ಎದ್ದಿಲ್ಲ ಎಂದು ಹೇಳಿದ್ರು. ಹೋಗಿ ನೋಡಿದಾಗ, ಆಕೆ ವಾಂತಿ ಬಂದಂತಾಗುತ್ತಿದೆ ಎಂದು ಹೇಳಿದ್ದಾಳೆ. ಅವಳನ್ನು ಕುರ್ಚಿಯಲ್ಲಿ ಕೂರಿಸಿ, ವಾಂತಿ ಮಾಡಲು ಅವಕಾಶ ಮಾಡಿಕೊಟ್ಟೆವು."
"ವಾಂತಿ ಮಾಡುವಾಗಲೇ ಅವಳಿಗೆ ಭೇದಿ ಹಾಗೂ ಮೂತ್ರ ಆಗಿದೆ. ತಕ್ಷಣವೇ ಗೆಳತಿ ಅವಳನ್ನು ಸ್ನಾನ ಮಾಡಿಸಿಕೊಂಡು ಬಂದಿದ್ದಾಳೆ. ಸ್ನಾನದಿಂದ ವಾಪಸಾದ ಮೇಲೆ ಗಂಜಿ ಕೊಟ್ಟಿದ್ದೇವೆ, ಆದರೆ ಅದನ್ನು ತಿನ್ನಲು ಸಾಧ್ಯವಾಗ್ತಿಲ್ಲ, ಸುಸ್ತಾಗ್ತಿದೆ ಎಂದಿದ್ದಾಳೆ. ತಕ್ಷಣವೇ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೇವೆ. ಅಲ್ಲಿ ವೈದ್ಯರು ವಿದ್ಯಾರ್ಥಿನಿ ಸಾವನ್ನಪ್ಪಿರುವುದಾಗಿ ಹೇಳಿದರು. ಅಲ್ಲಿ ವೈದ್ಯರು ಇದು ಕಾರ್ಡಿಯಾಕ್ ಅರೆಸ್ಟ್ ಆಗಿರಬಹುದು, ಶವಪರೀಕ್ಷೆ ಆಗುವವರೆಗೆ ಏನೂ ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ವಿದ್ಯಾರ್ಥಿನಿ ಸಾವು ನಮಗೆ ಸಾಕಷ್ಟು ನೋವುಂಟು ಮಾಡಿದೆ. ಹಾಗೆಯೇ ಅವಳ ಸಾವಿನ ಕುರಿತು ಅನುಮಾನವಿದ್ದು, ಶವ ಪರೀಕ್ಷೆ ನಡೆಸಿದಾಗ ನಮ್ಮ ಅನುಮಾನ ಬಗೆಹರಿಯುತ್ತದೆ. ಈ ಕುರಿತ ತನಿಖೆಗೆ ನಾವು ಸಂಪೂರ್ಣ ಸಹಕಾರ ನೀಡುತ್ತೇವೆ" ಎಂದು ತಿಳಿಸಿದ್ದಾರೆ.
ಆಸ್ಪತ್ರೆಗೆ ಶಾಸಕ ಗೋಪಾಲಕೃಷ್ಣ ಬೇಳೂರು ಭೇಟಿ: ವಿದ್ಯಾರ್ಥಿನಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಭೇಟಿ ನೀಡಿದ್ದಾರೆ. ಸಾವಿನ ಕುರಿತು ಮಾಹಿತಿ ಪಡೆದುಕೊಂಡ ಅವರು, ಪೊಲೀಸರಿಗೆ ಸಾವಿನ ಕುರಿತು ಸೂಕ್ತ ತನಿಖೆ ನಡೆಸುವಂತೆ ಸೂಚಿಸಿದ್ದಾರೆ.
ಇದನ್ನೂ ಓದಿ: ಸೋಮೇಶ್ವರ ರುದ್ರಪಾದೆಯಿಂದ ಸಮುದ್ರಕ್ಕೆ ಬಿದ್ದ ವಿದ್ಯಾರ್ಥಿನಿ ಸಾವು.. ಹುಟ್ಟುಹಬ್ಬದ ಮರುದಿನವೇ ದುರಂತ