ಶಿವಮೊಗ್ಗ : ಭಾನುವಾರ ನಡೆದಿದ್ದ ಗಲಾಟೆ ಸಂಬಂಧ ಇಂದು (ಸೋಮವಾರ) ಮಾತುಕತೆಗೆ ಕರೆಸಿ ಯುವಕನನ್ನು ಚಾಕುವಿನಿಂದ ಇರಿದು ಕೊಲೆಗೈದ ಘಟನೆ ಶಿಕಾರಿಪುರ ಪಟ್ಟಣದ ಕೆಹೆಚ್ಬಿ ಕಾಲೋನಿಯ ಬಳಿ ನಡೆದಿದೆ. ಮೃತನನ್ನು ಶಿಕಾರಿಪುರದ ಜನ್ನತ್ ಗಲ್ಲಿಯ ನಿವಾಸಿ ಮಹಮ್ಮದ್ ಜಾಫರ್(32) ಎಂದು ಗುರುತಿಸಲಾಗಿದೆ. ಈತನಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ.
ಭಾನುವಾರ ಶಿಕಾರಿಪುರದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿತ್ತು. ಈ ಸಂಬಂಧ ಮಾತುಕತೆ ನಡೆಸಲು ಮತ್ತೆ ಶಿಕಾರಿಪುರದ ಕೆಹೆಚ್ಬಿ ಕಾಲೋನಿಯ ಸಮೀಪ ಎರಡು ಗುಂಪುಗಳು ಸೇರಿವೆ. ಈ ವೇಳೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸುವ ಹಂತ ತಲುಪಿದೆ. ಎದುರಾಳಿ ಗುಂಪಿನ ವ್ಯಕ್ತಿಯೊಬ್ಬ ಮಹಮ್ಮದ್ ಜಾಫರ್‌ನನ್ನು ಹಿಂದಿನಿಂದ ಬಲವಾಗಿ ಹಿಡಿದುಕೊಂಡಿದ್ದಾನೆ. ಇನ್ನೋರ್ವ ಹೊಟ್ಟೆಗೆ ಚಾಕು ಇರಿದಿದ್ದಾನೆ.
ಜಾಫರ್ ರಕ್ತದ ಮಡುವಿನಲ್ಲಿ ಬಿದ್ದಿದ್ದು, ಆಸ್ಪತ್ರೆಗೆ ಕರೆತರುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾನೆ. ಶಿಕಾರಿಪುರ ಪುರಸಭೆ ಸದಸ್ಯ ರೋಷನ್ ಶಿಕಾರಿಪುರ ನಗರ ಪೊಲೀಸ್ ಠಾಣೆಯಲ್ಲಿ ಒಟ್ಟು 8 ಜನರ ಮೇಲೆ ದೂರು ದಾಖಲಿಸಿದ್ದಾರೆ. ಕೊಲೆಗೈದ ಇಬ್ಬರು ಆರೋಪಿಗಳು ಶಿವಮೊಗ್ಗ ನಿವಾಸಿಗಳೆಂದು ತಿಳಿದು ಬಂದಿದೆ. ಆರೋಪಿಗಳು ಗಾಂಜಾದ ಅಮಲಿನಲ್ಲಿದ್ದರು ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದ್ದು ಆರೋಪಿಗಳ ಬಂಧನಕ್ಕೆ ಎರಡು ತಂಡಗಳನ್ನು ರಚನೆ ಮಾಡಲಾಗಿದೆ.
ಫೋಲ್ಡಿಂಗ್ ಬ್ಲೇಡ್‌ನಿಂದ ಇರಿದು ಕೊಲೆ ಯತ್ನ: ಮದ್ಯ ಸೇವಿಸಿದ ಬಿಲ್ ಹಣ ಕೇಳಿದ್ದಕ್ಕೆ ವ್ಯಕ್ತಿಗೆ ಫೋಲ್ಡಿಂಗ್ ಬ್ಲೇಡ್‌ನಿಂದ ಇರಿದು ಕೊಲೆಗೆ ಯತ್ನಿಸಿದ್ದ ಘಟನೆ ಆಗಸ್ಟ್ 18ರಂದು ರಾತ್ರಿ 10:5 ರ ಸುಮಾರಿಗೆ ಮಂಗಳೂರು ನಗರದ ಸರ್ವಿಸ್ ಬಸ್ ನಿಲ್ದಾಣದ ಗೂಡಂಗಡಿ ಮುಂಭಾಗ ನಡೆದಿತ್ತು. ಹಲ್ಲೆಗೊಳಗಾದ ಈರಪ್ಪ ಕುರಿ ಎಂಬವರು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಳಿಸಿದ್ದರು. ಮೈಸೂರು ಮೂಲದ ಆರೋಪಿ ಮೊಹಮ್ಮದ್ ಹನೀಫ್ ಅಲಿಯಾಸ್ ಚಾಕು (30) ಎಂಬಾತನನ್ನು ಬಂಧಿಸಲಾಗಿತ್ತು.
ಪತ್ನಿ ಹತ್ಯೆ ಮಾಡಿ ಪೊಲೀಸರಿಗೆ ಶರಣಾದ ಪತಿ : ಕುಡಿದ ಅಮಲಿನಲ್ಲಿ ತನ್ನ ಪತ್ನಿಯನ್ನೇ ಹತ್ಯೆ ಮಾಡಿದ ಪತಿ ಠಾಣೆಗೆ ಬಂದು ಪೊಲೀಸರಿಗೆ ಶರಣಾಗಿರುವ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೇಬೆನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿತ್ತು. ಸುಲೋಚನಾ (45) ಕೊಲೆಯಾದ ಮಹಿಳೆ. ನಾಗರಾಜಪ್ಪ ಹತ್ಯೆಗೈದ ಆರೋಪಿ. ಪ್ರತಿನಿತ್ಯ ಮದ್ಯಪಾನ ಮಾಡಿ ಮನೆಗೆ ಬಂದು ಪತ್ನಿ ಸುಲೋಚನಾ ಜೊತೆ ಜಗಳವಾಡುತ್ತಿದ್ದ ಆರೋಪಿ, ಆ.11 ರಂದು ಎಂದಿನಂತೆ ಗಲಾಟೆ ಮಾಡಿದ್ದಾನೆ. ಈ ವೇಳೆ ಸುಲೋಚನಾಗೆ ಮನಬಂದಂತೆ ಥಳಿಸಿದ್ದು, ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಪ್ರಾಣಬಿಟ್ಟಿದ್ದರು. ಸಂತೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಮಂಗಳೂರು: ಜೆಸಿಬಿ ಬಳಸಿ ATM ಕಳವು ಯತ್ನ; ನಾಲ್ವರ ಬಂಧನ, ₹15.50 ಮೌಲ್ಯದ ಸೊತ್ತು ವಶಕ್ಕೆ