ಶಿವಮೊಗ್ಗ: ಇಂದು ಇಲ್ಲಿನ ಡಿಎಆರ್ ಸಭಾಂಗಣದಲ್ಲಿ ನೆರೆದಿದ್ದ ಜನರ ಮುಖಗಳಲ್ಲಿ ಮಂದಹಾಸವಿತ್ತು. ಕಳೆದು ಹೋಗಿದ್ದ ಮೊಬೈಲ್ ಮರಳಿ ಕೈ ಸೇರಿದ ಖುಷಿಯಲ್ಲಿ ಅವರಿದ್ದರು. ಶಿವಮೊಗ್ಗದ ಸಿಇಎನ್ ಪೊಲೀಸರು ಸಾರ್ವಜನಿಕರು ಕಳೆದುಕೊಂಡಿದ್ದ ಮೊಬೈಲ್‌ಗಳನ್ನು ರಿಕವರ್ ಮಾಡಿ ವಾರಸುದಾರರಿಗೆ ನೀಡಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಜಿ.ಕೆ. ಅವರು ಮೊಬೈಲ್ಗಳನ್ಜು ವಾರಸುದಾರರಿಗೆ ಹಸ್ತಾಂತರಿಸಿದರು. ಕಳೆದ ಮೂರು ತಿಂಗಳಲ್ಲಿ ಜಿಲ್ಲೆಯಲ್ಲಿ 200ಕ್ಕೂ ಅಧಿಕ ಮೊಬೈಲ್‌ಗಳು ಕಳೆದು ಹೋಗಿವೆ. ಈ ಪೈಕಿ 144 ಮೊಬೈಲ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
CEIR ನೆರವು ಪಡೆಯಿರಿ: ಮೊಬೈಲ್ ಕಳೆದು ಹೋದರೆ ಪೊಲೀಸ್ ಠಾಣೆಗೆ ಬಂದು ದೂರು ನೀಡಬೇಕಿಲ್ಲ. ಇದರ ಬದಲು ಬೇರೆ ಮೊಬೈಲ್‌ನಲ್ಲಿ CEIR ಆ್ಯಪ್‌ನಲ್ಲಿ ಮೊಬೈಲ್ ಕಳುವಾದ ಬಗ್ಗೆ ದೂರು ದಾಖಲಿಸಿ, ಅಲ್ಲಿ ತಿಳಿಸಿದಂತೆ ನಿಮ್ಮ ಮಾಹಿತಿ ದಾಖಲಿಸಿದ್ರೆ ಸಾಕು. ಇದರಿಂದ ನಿಮ್ಮ ಮೊಬೈಲ್ ಇರುವ ಜಾಗ ಲಭ್ಯವಾಗುತ್ತದೆ. ಈ ಆ್ಯಪ್ ಮೂಲಕವೇ ಸಿಇಎನ್ ಪೊಲೀಸರು ಮೊಬೈಲ್ ಹುಡುಕಿ ವಾರಸುದಾರರಿಗೆ ನೀಡುತ್ತಿದ್ದಾರೆ.
ನಂತರ ಮಾತನಾಡಿದ ಎಸ್ಪಿ ಮಿಥುನ್ ಕುಮಾರ್, ಮೂರು ತಿಂಗಳ ಹಿಂದೆ ಕಳೆದು ಹೋದ ಮೊಬೈಲ್‌ಗಳನ್ನು ಪತ್ತೆ ಹಚ್ಚಿ ನೀಡಲಾಗುತ್ತಿದೆ. ಮೊಬೈಲ್ ಕಳೆದು ಹೋದವರು ಭಯ ಪಡದೇ ಪೊಲೀಸ್ ಠಾಣೆಗೆ ಬಂದು ಮೊಬೈಲ್ ಕಳೆದು ಹೋದ ಬಗ್ಗೆ ದೂರು ನೀಡಬಹುದು. ಮೊಬೈಲ್ ಆ್ಯಪ್ ಮೂಲಕ ದೂರು ದಾಖಲಿಸಬಹುದು ಎಂದು ಮಾಹಿತಿ ನೀಡಿದರು.
ಮೊಬೈಲ್ ಮರಳಿ ಪಡೆದವರು ಸಂತಸ ವ್ಯಕ್ತಪಡಿಸಿ, ಪೊಲೀಸರಿಗೆ ಧನ್ಯವಾದ ತಿಳಿಸಿದ್ದಾರೆ. "ರೈಲು ನಿಲ್ದಾಣದಿಂದ ಮನೆಗೆ ವಾಪಸ್ ಆಗುವಾಗ ಬೈಕ್‌ನಿಂದ ಬಿದ್ದು ಮೊಬೈಲ್ ಕಳೆದು ಹೋಗಿತ್ತು. ನಂತರ ಪೊಲೀಸರಿಗೆ ದೂರು ನೀಡಿದ್ದೆ. ಇಂದು ಮೊಬೈಲ್ ಸಿಕ್ಕಿತು. ತುಂಬಾ ಸಂತೋಷವಾಗಿದೆ" ಎನ್ನುತ್ತಾರೆ ಸವಿತ ಗೋಪಾಲ.
ಇದನ್ನೂಓದಿ: ಯಡಿಯೂರಪ್ಪರ ಪುತ್ರ ಎಂಬ ಕಾರಣಕ್ಕೆ ಹೈಕಮಾಂಡ್ ನನಗೆ ಟಿಕೆಟ್ ನೀಡಿಲ್ಲ: ವಿಜಯೇಂದ್ರ