ಶಿವಮೊಗ್ಗ : ಕೊರೊನಾ 3ನೇ ಅಲೆಯ ಭೀತಿ ಎದುರಾದ ಹಿನ್ನೆಲೆ ರಾಜ್ಯ ಸರ್ಕಾರ ಹಲವು ಮಾರ್ಗಸೂಚಿಗಳನ್ನು ಹೊರಡಿಸಿದೆ. ಪ್ರವಾಸಿ ಸ್ಥಳಗಳಲ್ಲಿ ನಿರ್ಬಂಧ, ಸಭೆ, ಸಮಾರಂಭ ಎಲ್ಲದಕ್ಕೂ ನಿಯಂತ್ರಣ ಹೇರಿ ಸೀಮಿತ ಸಂಖ್ಯೆಯಲ್ಲಿ ಸರಳವಾಗಿ ಕಾರ್ಯಕ್ರಮ ರೂಪಿಸಲು ಅನುಮತಿ ನೀಡಿದೆ.
ಹೀಗಾಗಿ, ಇತಿಹಾಸ ಪ್ರಸಿದ್ಧ ಶಿವಮೊಗ್ಗದ ಹಿಂದೂ ಮಹಾಸಭಾ ಗಣೇಶೋತ್ಸವವನ್ನು ಸರಳವಾಗಿ ಅಚರಿಸಲು ನಿರ್ಧರಿಸಿದ್ದು, ಅದ್ದೂರಿ ಮೆರವಣಿಗೆ ಹಾಗೂ ರಾಜಬೀದಿ ಉತ್ಸವವನ್ನು ರದ್ದುಗೊಳಿಸಲಾಗಿದೆ.
ಸರ್ಕಾರದ ಸೂಚನೆ ಬೆನ್ನಲ್ಲೇ ಶಿವಮೊಗ್ಗ ಹಿಂದೂ ಮಹಾ ಮಂಡಳಿಯು ಸಭೆ ನಡೆಸಿ, ಸರಳವಾಗಿ ಹಬ್ಬ ಆಚರಿಸಲು ನಿರ್ಧಾರ ಕೈಗೊಂಡಿದೆ. ನಗರದ ಕೋಟೆ ಭೀಮೇಶ್ವರ ದೇವಸ್ಥಾನದಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಟಾಪಿಸಿ, ನಂತರ ಅಲ್ಲೇ ತುಂಗಾನದಿಯಲ್ಲಿ ವಿಸರ್ಜಿಸಲು ತೀರ್ಮಾನಿಸಲಾಗಿದೆ.
ಸಾಂಸ್ಕೃತಿಕ ಕಾರ್ಯಕ್ರಮ, ಅದ್ದೂರಿ ರಾಜಬೀದಿ ಉತ್ಸವವನ್ನು ರದ್ದು ಮಾಡಿ ಸರ್ಕಾರ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ ಮಾಡಿ ಅನುಮತಿ ನೀಡಿದರೆ ಮಾತ್ರ ಅದ್ದೂರಿಯಾಗಿ ಆಚರಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಭಕ್ತರಿಗೆ ನಿರಾಸೆ: 1941ರಲ್ಲಿ ಶಿವಮೊಗ್ಗದಲ್ಲಿ ನಡೆದ ಹಿಂದೂ ಮಹಾಸಭಾದ ಅಖಿಲ ಭಾರತ ಕಾರ್ಯಕಾರಣಿ ಸಭೆ ನಡೆದಿತ್ತು. ಇದಾದ ಮೇಲೆ ಶಿವಮೊಗ್ಗದಲ್ಲಿ ಮೊದಲ ಬಾರಿಗೆ 1945ರಲ್ಲಿ ಗಣಪತಿ ಪ್ರತಿಷ್ಠಾಪಿಸಲಾಯಿತು.
ಅಂದಿನಿಂದ ಅದ್ದೂರಿಯಾಗಿ ಪ್ರತಿವರ್ಷ ನಡೆಯುತ್ತಿದ್ದ ಹಿಂದೂ ಮಹಾಸಭಾ ಗಣೇಶೋತ್ಸವದಲ್ಲಿ ಲಕ್ಷಾಂತರ ಭಕ್ತರು ಭಾಗಿಯಾಗುತ್ತಿದ್ದರು. ಆದರೆ, ಕಳೆದ ಎರಡು ವರ್ಷದಿಂದ ಕೋವಿಡ್ ಕಾರಣಕ್ಕೆ ಅದ್ದೂರಿ ಗಣೇಶೋತ್ಸವಕ್ಕೆ ಬ್ರೇಕ್ ಬಿದ್ದಿದೆ. ಇದರಿಂದಾಗಿ ಭಕ್ತರಿಗೆ ನಿರಾಶೆ ಉಂಟಾಗಿದೆ.