ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಮುಂದುವರೆದಿದೆ. ನಾನು ಸಂಸದನಾದ ಬಳಿಕ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದು, ಕ್ಷೇತ್ರದಲ್ಲಿ ಸಾವಿರಾರು ಕೋಟಿ ವೆಚ್ಚದ ಕಾಮಗಾರಿಗಳು ನಿರಂತರವಾಗಿ ನಡೆಯುತ್ತಿವೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
ನಗರದಲ್ಲಿ ನಡೆದ ಮಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಮಾರ್ಗದ ಹೊಸ ರೈಲು ಮಾರ್ಗಕ್ಕೆ ಈಗಾಗಲೇ ಟೆಂಡರ್ ಕರೆಯಲಾಗಿದೆ. ಸುಮಾರು 535 ಕೋಟಿ ರೂ. ವೆಚ್ಚದ ಕಾಮಗಾರಿ ಇದು. ಸ್ವಾತಂತ್ರ್ಯದ ನಂತರ ಜಿಲ್ಲೆಯಲ್ಲಿ ಮೊದಲ ಹೊಸ ರೈಲು ಮಾರ್ಗವಾಗಿದ್ದು, ಇದೇ ಮೊದಲು ಇದು 30ಕ್ಕೂ ಹೆಚ್ಚು ಹಳ್ಳಿಗಳನ್ನು ಸಂಪರ್ಕಿಸುತ್ತಿದೆ ಎಂದರು.
ಈ ರೈಲು ಮಾರ್ಗಕ್ಕೆ ಸಂಬಂಧಿಸಿದಂತೆ ಈಗಾಗಲೇ ಸುಮಾರು 555 ಎಕರೆ ಜಮೀನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ರೈತರಿಗೆ ಪರಿಹಾರ ಕೂಡ ನೀಡಲಾಗಿದೆ. ಇದಕ್ಕಾಗಿ 125 ಕೋಟಿ ರೂ. ವೆಚ್ಚ ಮಾಡಲಾಗಿದೆ. 30 ತಿಂಗಳ ಅವಧಿಯೊಳಗೆ ರೈಲು ಮಾರ್ಗ ಸಿದ್ಧವಾಗಲಿದೆ. ಇದು ಮಲೆನಾಡು ಮತ್ತು ಬಯಲು ಸೀಮೆಗೆ ಸಂಪರ್ಕ ಕಲ್ಪಿಸಲಿದೆ ಎಂದು ಹೇಳಿದರು.
ಡಿಸೆಂಬರ್ ಅಂತ್ಯಕ್ಕೆ ವಿಮಾನ ಹಾರಾಟ: ಹೊಸದಾಗಿ ರಾಷ್ಟ್ರೀಯ ಹೆದ್ದಾರಿಗಳ ಬೈಪಾಸ್‌ಗಳನ್ನು ಕೂಡ ನಿರ್ಮಿಸಲಾಗುತ್ತಿದೆ. ತೀರ್ಥಹಳ್ಳಿ, ಭಾರತೀಪುರ, ಹೊಸನಗರ, ಬೈಂದೂರು, ಸಿಗಂದೂರು, ಮಾವಿನಕೊಪ್ಪದಿಂದ ಆಡುಗೋಡಿಯವರೆಗೆ ಉಪ ರಾಷ್ಟ್ರೀಯ ಹೆದ್ದಾರಿ ಹೀಗೆ ವಿವಿಧ ಸಂಪರ್ಕ ರಸ್ತೆಗಳನ್ನು 7 ಸಾವಿರ ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಿಸಲಾಗುತ್ತದೆ. ಜೊತೆಗೆ ಶಿವಮೊಗ್ಗ ವಿಮಾನ ನಿಲ್ದಾಣದ ಕೆಲಸ ಭರದಿಂದ ಸಾಗಿದೆ. ಡಿಸೆಂಬರ್ ಅಂತ್ಯಕ್ಕೆ ವಿಮಾನ ಹಾರಾಟದ ನಿರೀಕ್ಷೆ ಇದೆ ಎಂದು ಸಂಸದರು ತಿಳಿಸಿದರು.
ಇದಲ್ಲದೇ, ಕೊಲ್ಲೂರಿನಲ್ಲಿ ಮೆಟ್ಟಿಲು ನಿರ್ಮಾಣ, ಸಿಗಂದೂರಿನಲ್ಲಿ ಸೇತುವೆ ನಿರ್ಮಾಣ, ಶಿಕಾರಿಪುರದ ಶರಣರ ಕೇಂದ್ರದಲ್ಲಿ ಅಭಿವೃದ್ಧಿ, ಭದ್ರಾವತಿ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದ ಅಭಿವೃದ್ಧಿ ಸಹ ಕೈಗೊಳ್ಳಲಾಗುವುದು ಎಂದು ವಿವರಿಸಿದರು.
ಈಸೂರಿನಲ್ಲಿ ವಿಶೇಷ ಕಾರ್ಯಕ್ರಮ : ಈ ಬಾರಿಯ ಸ್ವಾತಂತ್ರ್ಯೋತ್ಸವವನ್ನು ಸಡಗರ ಮತ್ತು ಸಂಭ್ರಮದಿಂದ ಪ್ರತಿ ಮನೆಯಲ್ಲೂ ಆಗಸ್ಟ್ 13ರಿಂದ 15ರ ವರೆಗೆ ಮೂರು ದಿನಗಳ ತನಕ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಆಚರಿಸಲಾಗುತ್ತದೆ. ಜಿಲ್ಲೆಯಲ್ಲಿ ಈಗಾಗಲೇ 4 ಲಕ್ಷ ಮನೆಗಳಿಗೆ ಧ್ವಜ ವಿತರಿಸಲಾಗಿದೆ. ಶಿಕಾರಿಪುರದ ಈಸೂರು ಗ್ರಾಮದಲ್ಲಿ ಆ.14ರಂದು ಮಧ್ಯಾಹ್ನ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಅನೇಕ ಗಣ್ಯರು ಆಗಮಿಸುತ್ತಿದ್ದಾರೆ ಎಂದು ಬಿ.ವೈ.ರಾಘವೇಂದ್ರ ಮಾಹಿತಿ ನೀಡಿದರು.
ಇದನ್ನೂ ಓದಿ: ಬಿಎಸ್ವೈ ಭೇಟಿಯಾದ ಬೊಮ್ಮಾಯಿ: ಲೋಕಾಯುಕ್ತ ಬಲವರ್ಧನೆ ಕುರಿತು ನಡೀತಾ ಚರ್ಚೆ?