ಶಿವಮೊಗ್ಗ: ಬಸ್ ಸ್ಟ್ಯಾಂಡ್ ನಿಂದ ಬಾಡಿಗೆ ಹೋಗಿದ್ದ ವೇಳೆ ಆಟೋದಲ್ಲಿದ್ದ ಮಹಿಳೆಯಿಂದ 5 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಕದ್ದಿದ್ದ ಆರೋಪದ ಮೇಲೆ ಆಟೋ ಚಾಲಕನನ್ನು ದೊಡ್ಡಪೇಟೆ ಪೊಲೀಸರು ಬಂಧಿಸಿದ್ದಾರೆ.
ನವೆಂಬರ್ 4 ರಂದು ಮಹಿಳೆಯರಿಬ್ಬರು ಬಸ್ ನಿಲ್ದಾಣದಿಂದ ಎನ್. ಟಿ. ರಸ್ತೆಯ 7 ನೇ ಕ್ರಾಸ್ ಗೆ ಆಟೋ ಬಾಡಿಗೆ ಮಾಡಿಕೊಂಡು ಹೋಗಿದ್ದರು. ಈ ವೇಳೆ ಬಂಗಾರದ ಒಡವೆ ಇದ್ದ ಬ್ಯಾಗ್ ಅನ್ನು ಆಟೋದ ಮುಂಭಾಗದಲ್ಲಿಟ್ಟು ಉಳಿದು ಬ್ಯಾಗ್ ನ್ನು ತಮ್ಮ ಬಳಿ ಇಟ್ಟುಕೊಂಡಿದ್ದರು. ನಂತರ ಮನೆಗೆ ಬಂದಾಗ ತಮ್ಮ ಬಳಿ ಇದ್ದ ಬ್ಯಾಗ್ ನ್ನು ಮನೆ ಒಳಗೆ ಇಟ್ಟು ಬರುವಷ್ಟರಲ್ಲಿ ಆಟೋ ಚಾಲಕ ಬಂಗಾರದ ಒಡವೆಯ ಬ್ಯಾಗ್ ಸಮೇತ ಪರಾರಿಯಾಗಿದ್ದ. ಈ ಕುರಿತು ಮಹಿಳೆಯರು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ದೂರಿನ ಮೇರೆಗೆ ತನಿಖೆ ಕೈಗೊಂಡಿದ್ದ ಪೊಲೀಸರು ಸಿಸಿಟಿವಿ ದೃಶ್ಯದ ಆಧಾರದ ಮೇಲೆ ಅಬ್ಬಲಗೆರೆಯ ನಿವಾಸಿ, ಆಟೋ ಚಾಲಕ ಬಸವನಗೌಡ ಸಲಬಗೌಡ ಎಂಬಾತನನ್ನು ಬಂಧಿಸಿ ವಿಚಾರಣೆಗೆ ಒಳಪಡಿದ್ದರು. ಈ ವೇಳೆ ಆರೋಪಿಯು ಚಿನ್ನ ಎಗರಿಸಿರುವುದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗ್ತಿದೆ. ಸದ್ಯ ಪೊಲೀಸರು 5 ಲಕ್ಷದ 7 ಸಾವಿರ ರೂ. ಮೌಲ್ಯದ 159 ಗ್ರಾಂ ಬಂಗಾರವನ್ನು ಹಾಗೂ ಆಟೋ ರಿಕ್ಷಾವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಜೊತೆಗೆ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.