ಶಿವಮೊಗ್ಗ: ಆಯುಷ್ಮಾನ್ ಭಾರತ್,ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಶಿವಮೊಗ್ಗ ತಾಲೂಕಿನಲ್ಲಿ ಒಟ್ಟು 10,705 ಕಾರ್ಡ್ಗಳನ್ನು ವಿತರಿಸಲಾಗಿದೆ ಎಂದು ಶಿವಮೊಗ್ಗ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಜಿ ಇ ವಿರುಪಾಕ್ಷಪ್ಪ ತಿಳಿಸಿದರು.
ಅಟಲ್ ಬಿಹಾರಿ ವಾಜಪೇಯಿ ಅವರ ಹುಟ್ಟುಹಬ್ಬದ ನಿಮಿತ್ತ ಹಮ್ಮಿಕೊಂಡಿದ್ದ ಅಭಿಯಾನದಲ್ಲಿ, ಬೈಂದೂರು ಕ್ಷೇತ್ರ ಹೊರತುಪಡಿಸಿ, ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 65,134 ಕಾರ್ಡುಗಳನ್ನು ವಿತರಿಸಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ 1.60 ಲಕ್ಷ ಅರ್ಹತಾ ಪತ್ರಗಳನ್ನು ತಲುಪಿಸಲಾಗಿದೆ ಎಂದರು.
ಪ್ರಧಾನಿ ಮೋದಿಯವರ ಮಹತ್ವಾಕಾಂಕ್ಷೆಯ ಆಯುಷ್ಮಾನ್ ಭಾರತ್ ಯೋಜನೆ, ವಿಶ್ವದಲ್ಲಿ ಅತಿ ದೊಡ್ಡ ಸರ್ಕಾರಿ ಪ್ರಾಯೋಜಿತ ಆರೋಗ್ಯ ಯೋಜನೆ. ಈಗಾಗಲೇ 50 ಕೋಟಿ ಜನರು ಇದರ ಲಾಭ ಪಡೆದುಕೊಂಡಿದ್ದಾರೆ ಎಂದರು. ಯೋಜನೆ ಜಾರಿಯಾದ ಎರಡು ತಿಂಗಳಲ್ಲಿ ರಾಜ್ಯದ 28,000 ಜನರು ಇದರ ಲಾಭ ಪಡೆದುಕೊಂಡಿದ್ದಾರೆ. ಹೃದಯಾಘಾತ, ಕ್ಯಾನ್ಸರ್ ಹಾಗೂ ಮತ್ತಿತರ ಮಾರಕ ಕಾಯಿಲೆಗಳಿಗೆ ಈ ಕಾರ್ಡ್ ಪ್ರಯೋಜನಕಾರಿ ಎಂದರು.
ಈ ವೇಳೆ ಗ್ರಾಮಾಂತರ ಶಾಸಕ ಕೆ ಬಿ ಅಶೋಕ್ ನಾಯಕ್, ಜಿಲ್ಲಾ ಪಂಚಾಯತ್ ಸದಸ್ಯ ಕಾಂತೇಶ್, ಸೌಮ್ಯ ಬೋಜ್ಯಾ ನಾಯಕ್ ಹಾಗೂ ತಮ್ಮಡಿಹಳ್ಳಿ ನಾಗರಾಜ್ ಉಪಸ್ಥಿತರಿದ್ದರು.