ಶಿವಮೊಗ್ಗ: ಇಂದು ಸಿಎಂ ಯಡಿಯೂರಪ್ಪ ಶಿವಮೊಗ್ಗ ಭೇಟಿಗೆ ಆಗಮಿಸಿದ ವೇಳೆ ಬೆಂಗಾವಲು ಪಡೆ ವಾಹನಗಳ ಜೊತೆ ಇದ್ದ ಪಾಲಿಕೆ ಮೇಯರ್ ಅವರ ಇನ್ನೋವಾ ವಾಹನ ಚಾಲಕನ ಅಜಾಗರೂಕತೆಯಿಂದ ಜಖಂ ಗೊಂಡಿದೆ.
ಸಿಎಂ ಯಾವುದೇ ಜಿಲ್ಲೆಗೆ ಹೋದರೂ ಅಲ್ಲಿ ಪೊಲೀಸರ ಬೆಂಗಾವಲು ಪಡೆ ವಾಹನಗಳು ಹಿಂದೆ-ಮುಂದೆ ಇರುತ್ತವೆ. ಅದೇ ರೀತಿ ಇಂದು ಸಿಎಂ ಅವರು ಬೆಳಗ್ಗೆ ಮಂಡಗದ್ದೆಯ ಹೆಗಲತ್ತಿ ಗ್ರಾಮಕ್ಕೆ ಭೇಟಿ ನೀಡಿ ಶಿವಮೊಗ್ಗಕ್ಕೆ ವಾಪಸ್ ಆಗಿ, ನೆರೆಯಿಂದ ಹಾನಿಗೊಳಗಾಗಿರುವ ರಾಜೀವ್ ಗಾಂಧಿ ಬಡಾವಣೆಗೆ ಬರುವ ವೇಳೆ ಬೆಂಗಾವಲು ಪಡೆ ವಾಹನಗಳ ಜೊತೆ ಬರುತ್ತಿದ್ದ ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್ ಲತಾ ಗಣೇಶ್ರವರ ಇನ್ನೋವಾ ವಾಹನದ ಡ್ರೈವರ್ ಅಚಾನಕ್ಕಾಗಿ ಬ್ರೇಕ್ ಹಾಕಿದ ಪರಿಣಾಮ ತಮ್ಮ ವಾಹನದ ಮುಂದಿದ್ದ ಪೊಲೀಸರ ಬೆಂಗಾವಲು ಪಡೆ ವಾಹನಕ್ಕೆ ಡಿಕ್ಕಿ ಹೊಡೆದಿದೆ.
ಕಾರಿನ ಒಳಗಿದ್ದ ಮೇಯರ್ಗೆ ಯಾವುದೇ ಹಾನಿ ಆಗಿಲ್ಲವಾದರೂ ಕಾರಿನ ಮುಂಭಾಗದ ಬಂಪರ್, ಬಾನೆಟ್ , ಹೆಡ್ ಲೈಟ್ ಜಖಂಗೊಂಡಿವೆ. ಇದರಿಂದ ಕಾರಿನ ಬಾನೆಟ್ ಮೇಲಕ್ಕೆ ಎದ್ದಿದ್ದು, ಮೇಯರ್ ಬೋರ್ಡ್ ಸಹ ಬಾಗಿರಿವುದರಿಂದ ಕಾರಿನ ಅಂದವೇ ಹೋಗಿದೆ. ನಂತರ ಜಖಂಗೊಂಡ ಕಾರನ್ನು ಏರಲು ನಿರಾಕರಿಸಿದ ಮೇಯರ್ ಉಪ ಮೇಯರ್ ಚನ್ನಬಸಪ್ಪನವರು ತಮ್ಮ ಕಾರನ್ನು ಮೇಯರ್ ಅವರಿಗೆ ನೀಡಿದರು.