ಶಿವಮೊಗ್ಗ: ಜಿಲ್ಲೆಯಲ್ಲಿ ಆಯುರ್ವೇದ ವಿಶ್ವವಿದ್ಯಾಲಯ ಸ್ಥಾಪಿಸುವಂತೆ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರದ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಸ್ತುತ ಕೊರೊನಾ ಕಾಯಿಲೆ ಹೆಚ್ಚಾಗುತ್ತಿದೆ. ಇದರ ಜೊತೆಗೆ ಡೆಂಗ್ಯೂ, ಮಂಗನ ಕಾಯಿಲೆ ಮುಂತಾದ ಮಾರಕ ರೋಗಗಳು ಹರಡುತ್ತಿವೆ. ಈ ಹಿನ್ನೆಲೆ ಎಲ್ಲವನ್ನು ತಡೆಗಟ್ಟಲು ಮತ್ತು ಮನುಷ್ಯರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಅನುಕೂಲವಾಗುವಂತೆ ಆಯುರ್ವೇದ ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ಅಗತ್ಯತೆ ಇದೆ ಎಂದರು.
ಈಗಾಗಲೇ ಆಯುರ್ವೇದಿಕ್ ತಜ್ಞರ ಪ್ರಕಾರ ಭಾರತೀಯ ಪರಂಪರೆಯಲ್ಲಿ ಆಯುರ್ವೇದ ವಿಶಿಷ್ಟ ಸ್ಥಾನ ಪಡೆದಿದೆ. ಎಲ್ಲಾ ಕಾಯಿಲೆಗಳಿಗೂ ಆಯುರ್ವೇದ ದಿವ್ಯ ಔಷಧವಾಗಲಿದೆ. ಸರ್ಕಾರ ಇದನ್ನು ಪ್ರೋತ್ಸಾಹಿಸಬೇಕಾಗಿದೆ. ಭಾರತವಲ್ಲದೆ ಹೊರದೇಶಗಳಲ್ಲಿ ಕೂಡ ಇದರ ಪ್ರಾಮುಖ್ಯತೆ ಹೆಚ್ಚಾಗಿದೆ. ಕೊರೊನಾ ವೈರಸ್ಗೆ ಆಯುರ್ವೇದವೇ ರಾಮಬಾಣ ಎಂದು ಆಯುರ್ವೇದ ತಜ್ಞರು ಹೇಳುತ್ತಿದ್ದಾರೆ. ಹಾಗಾಗಿ ಆಯುರ್ವೇದವನ್ನು ಪ್ರೋತ್ಸಾಹಿಸುವ ಹಾಗೂ ಸಂಶೋಧನೆಗೆ ಒಳಪಡಿಸುವ ಅಗತ್ಯವಿದೆ.
ಈಗಾಗಲೇ ಸೋಗಾನೆ ಗ್ರಾಮದ ಹತ್ತಿರ ನೂರು ಎಕರೆ ಸರ್ಕಾರಿ ಜಮೀನನ್ನು ಆಯುರ್ವೇದಿಕ್ ಕಾಲೇಜು ಮತ್ತು ಆಸ್ಪತ್ರೆಗಾಗಿ ಸರ್ಕಾರ ಮಂಜೂರು ಮಾಡಿದೆ.ಇದಕ್ಕೆ ಪೂರಕವಾಗಿ ಗಾಜನೂರು ಬಳಿ 50 ಎಕರೆ ಪ್ರದೇಶದಲ್ಲಿ ಗಿಡಮೂಲಿಕೆ ವನ ಸ್ಥಾಪಿಸುವ ಗುರಿ ಹೊಂದಲಾಗಿದೆ. ಆಯುರ್ವೇದಿಕ್ ವಿವಿಗೆ 2.7 ಲಕ್ಷ ಕೋಟಿ ರೂ. ಮಂಜೂರಾಗಿದೆ. ಈ ಜಾಗದ ಬಗರಹುಕುಂ ರೈತರಿಗೂ ಕೂಡ ಪರಿಹಾರ ನೀಡಲಾಗಿದೆ. ಹಾಗಾಗಿ ಶೀಘ್ರವೇ ಸರ್ಕಾರಿ ಆಯುರ್ವೇದಿಕ್ ವಿಶ್ವವಿದ್ಯಾಲಯ ಸ್ಥಾಪಿಸಲು ಮುಖ್ಯಮಂತ್ರಿಗಳು ಮುಂದಾಗಬೇಕು. ಇದಕ್ಕಾಗಿ ಮತ್ತೆ 110 ಕೋಟಿ ರೂಪಾಯಿ ಬಿಡುಗಡೆ ಮಾಡಬೇಕು, ವಿಳಂಬ ನೀತಿ ಅನುಸರಿಸಿದರೆ ಹೋರಾಟ ಮಾಡಲಾಗುವುದು ಎಂದರು.