ಶಿವಮೊಗ್ಗ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿ ಖಂಡಿಸಿ ಶಿವಮೊಗ್ಗದಲ್ಲಿ ರಾಜ್ಯ ರೈತ ಸಂಘ ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ ನಡೆಸಿತು.
ನಗರದ ಎಂಆರ್ಎಸ್ ವೃತ್ತದಲ್ಲಿ ರಾಷ್ಟ್ರೀಯ ಹೆದ್ದಾರಿ 206 ತಡೆದು ಆಕ್ರೋಶ ಹೊರ ಹಾಕಿದರು. ಕೊರೊನಾ ಸಮಯದಲ್ಲಿ ರೈತ ವಿರೋಧಿ ಕಾಯ್ದೆಗಳನ್ನು ಸುಗ್ರೀವಾಜ್ಞೆಗಳ ಮೂಲಕ ಜಾರಿಗೆ ತಂದು ದೇಶದ ರೈತರನ್ನು ಬೀದಿಪಾಲು ಮಾಡಲು ಸರ್ಕಾರಗಳು ಹೊರಟಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿದರು. ಇದು ಬೆಂಗಳೂರು-ಹೊನ್ನಾವರ ರಸ್ತೆಯಾದ ಕಾರಣ ಕಿಲೋ ಮೀಟರ್ಗಟ್ಟಲೆ ವಾಹನಗಳು ನಿಂತಿದ್ದವು.
ಈ ವೇಳೆ ಮೆಕ್ಕೆಜೋಳವನ್ನು ಕನಿಷ್ಠ 1850 ರೂ. ಬೆಂಬಲ ಬೆಲೆಯಡಿ ಖರೀದಿ ಮಾಡಬೇಕು. ಪಂಜಾಬ್ ಸರ್ಕಾರ ಕೃಷಿ ಉತ್ಪನ್ನಗಳಿಗೆ ಘೋಷಣೆ ಮಾಡುವ ಎಂಎಸ್ಪಿ ದರಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡಿದರೆ, ಖರೀದಿ ಮಾಡಿದರೆ ಶಿಕ್ಷಾರ್ಹ ಅಪರಾಧ ಎಂದು ಕಾನೂನು ತಂದಿದ್ದು, ಅದೇ ರೀತಿ ರಾಜ್ಯದಲ್ಲೂ ಕಾನೂನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು. 2019ರ ಬಿತ್ತನೆ ಬೀಜ ಕಾಯ್ದೆ ಹಿಂಪಡೆಯಬೇಕು. ಹೀಗೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಲಾಯಿತು. ಹೆದ್ದಾರಿ ತಡೆಯನ್ನು ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ ನೇತೃತ್ವದಲ್ಲಿ ನಡೆಸಲಾಯಿತು.