ಶಿವಮೊಗ್ಗ : ಶರಾವತಿ ಹಿನ್ನೀರಿನ ಜನರ ಬಹು ದಿನದ ಬೇಡಿಕೆಯಾದ ಸೇತುವೆ ನಿರ್ಮಾಣಕ್ಕೆ ಶರಾವತಿ ನದಿಯ ನೀರೆ ಅಡ್ಡಿಯಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಕರ್ನಾಟಕ ವಿದ್ಯುತ್ ನಿಗಮಕ್ಕೆ ಜಿಲ್ಲಾಡಳಿತದ ಮೂಲಕ ಪತ್ರ ಬರೆದಿದ್ದಾರೆ.
ನಾಡಿಗೆ ಬೆಳಕು ನೀಡುವ ಸಲುವಾಗಿ ಶರಾವತಿ ನದಿಗೆ ಲಿಂಗನಮಕ್ಕಿಯಲ್ಲಿ ನಿರ್ಮಾಣವಾದ ಅಣೆಕಟ್ಟೆನಿಂದಾಗಿ ನೂರಾರು ಗ್ರಾಮಗಳು ಮುಳುಗಡೆಯಾಗಿದ್ದವು. ಅಳಿದುಳಿದವರು ಇದೇ ಶರಾವತಿ ನದಿಯ ದಡದ ಮೇಲೆ ಜೀವನ ನಡೆಸುತ್ತಿದ್ದಾರೆ. ಇದರಿಂದ ಈ ಭಾಗಕ್ಕೆ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ.
ಈ ಸೇತುವೆಯು ಅಂಬರಗೊಡ್ಲು ಹಾಗೂ ಕಳಸವಳ್ಳಿ ನಡುವೆ ಸುಮಾರು 2.5 ಕಿ.ಮೀ ದೂರದ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಈ ಸೇತುವೆಗಾಗಿ 423 ಕೋಟಿ ರೂ. ನಿಗದಿ ಮಾಡಲಾಗಿದೆ. ಅಲ್ಲದೆ ಈ ಸೇತುವೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮಾಡಿ ನಿರ್ಮಾಣ ಮಾಡಲಾಗುತ್ತಿದೆ.
ಸೇತುವೆ ನಿರ್ಮಾಣಕ್ಕಾಗಿ 2018ರ ಫೆಬ್ರವರಿಯಲ್ಲಿ ಕೇಂದ್ರದ ಸಚಿವರಾದ ನಿತಿನ್ ಗಡ್ಕರಿ ಅವರು ಶಂಕು ಸ್ಥಾಪನೆ ನೆರವೇರಿಸಿದ್ದರು. ಕಾಮಗಾರಿಯನ್ನು ಭೂಪಾಲ್ನ ದಿಲೀಪ್ ಬಿಲ್ಡಕಾನ್ ಕಂಪನಿ ನಡೆಸುತ್ತಿದೆ. ಆದರೆ, ಸೇತುವೆ ಕಾಮಗಾರಿ ಮುಂದುವರೆಸಲು ಹಿನ್ನೀರಿನ ನೀರನ್ನು ಕಡಿಮೆ ಮಾಡಬೇಕೆಂದು ಜಿಲ್ಲಾಡಳಿತ ಕೆಪಿಸಿಎಲ್ಗೆ ಪತ್ರ ಬರೆದಿದೆ.
ಕೆಪಿಸಿಎಲ್ಗೆ ಜಿಲ್ಲಾಡಳಿತ ಪತ್ರ : ಸಿಗಂದೂರು ಸೇತುವೆ ನಿರ್ಮಾಣಕ್ಕೆ 1.760 ಅಡಿಗೆ ನೀರು ಕಡಿಮೆ ಮಾಡಬೇಕೆಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಶಿವಮೊಗ್ಗ ಜಿಲ್ಲಾಡಳಿತದ ಮೂಲಕ ಪತ್ರವನ್ನು ಬರೆಸಿದೆ. ಲಿಂಗನಮಕ್ಕಿ ಜಲಾಶಯದ ಒಟ್ಟು ನೀರಿನ ಮಟ್ಟ 1,819 ಅಡಿ. ಹಾಲಿ ಜಲಾಶಯದಲ್ಲಿ 1,803 ಅಡಿಯಷ್ಟು ನೀರು ಇದೆ. ಈ ನೀರನ್ನು 1,760 ಅಡಿಗೆ ಇಳಿಸಬೇಕೆಂದು ಪತ್ರ ಬರೆಯಲಾಗಿದೆ. ಅಂದ್ರೇ ಸುಮಾರು 60 ಅಡಿ ಟಿಎಂಸಿ ನೀರನ್ನು ಜಲಾಶಯದಿಂದ ನದಿಗೆ ಬಿಡಬೇಕು ಎಂದು ಪತ್ರ ಬರೆಯಲಾಗಿದೆ.
ಇದಕ್ಕೆ ಇನ್ನೂ ಕೆಪಿಸಿ ಯಾವುದೇ ಉತ್ತರವನ್ನು ನೀಡಿಲ್ಲ. ಒಂದು ವೇಳೆ ಜಲಾಶಯದಿಂದ ನೀರನ್ನು ನದಿಗೆ ಬಿಟ್ಟರೆ, ಬೇಸಿಗೆಯಲ್ಲಿ ವಿದ್ಯುತ್ ತಯಾರಿಕೆಗೆ ತೀವ್ರ ತೂಂದರೆಯಾಗಲಿದೆ. ಏಷ್ಯಾದಲ್ಲಿಯೇ ಅತ್ಯಂತ ಕಡಿಮೆ ದರದಲ್ಲಿ ಜಲ ವಿದ್ಯುತ್ ತಯಾರು ಮಾಡುವ ಹೆಗ್ಗಳಿಕೆಯನ್ನು ಲಿಂಗನಮಕ್ಕಿ ಜಲಾಶಯ ಹೊಂದಿದೆ.
ಇದು ರಾಣೆಬೆನ್ನೂರು- ಬೈಂದೂರು ರಾಷ್ಟ್ರೀಯ ಹೆದ್ದಾರಿಯಾಗಲಿದೆ. ಹಾಲಿ ಇದು ಸಾಗರ ಪಟ್ಟಣದಿಂದ ಹೊಸನಗರದ ಮರಕುಟುಕದವರೆಗೂ ಸುಮಾರು 78 ಕಿ.ಮೀ ದೂರದ ರಸ್ತೆಯಾಗಿದೆ. ಸೇತುವೆಯು 2.5 ಕಿ.ಮೀ ನಿರ್ಮಾಣವಾಗಲಿದೆ. ಇದು ರಾಜ್ಯದ ಅತಿ ಉದ್ದನೆಯ ಎರಡನೇ ಸೇತುವೆಯಾಗಿದೆ. 16 ಮೀಟರ್ ಅಗಲ, 30 ರಿಂದ 55 ಮೀಟರ್ ಎತ್ತರವನ್ನು ಹೊಂದಲಿದೆ. ಸೇತುವೆಯು 17 ಕೇಬಲ್ ಪಿಲ್ಲರ್ ಒಳಗೊಳ್ಳಲಿದೆ.
ಲಿಂಗನಮಕ್ಕಿಯಲ್ಲಿ ವಾರ್ಷಿಕ 1,469 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ : ಲಿಂಗನಮಕ್ಕಿ ಜಲಾಶಯದಿಂದ ವಾರ್ಷಿಕವಾಗಿ 1,469.8 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತದೆ. ಲಿಂಗನಮಕ್ಕಿಯ ಮಹಾತ್ಮಗಾಂಧಿ, ಶರಾವತಿ, ಲಿಂಗನಮಕ್ಕಿ ಹಾಗೂ ಗೇರುಸೂಪ್ಪದಿಂದ ಜಲ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆ ಮಾಡುವ ಜಲಾಶಯದಿಂದ ನೀರನ್ನು ಹೊರಕ್ಕೆ ಹಾಕುವುದು ಅಷ್ಟು ಸೂಕ್ತವಲ್ಲ. ಇದಕ್ಕೆ ಇನ್ನೂ ಕೆಪಿಸಿಯು ಜಿಲ್ಲಾಡಳಿತದ ಪತ್ರಕ್ಕೆ ಯಾವುದೇ ಉತ್ತರ ನೀಡಿಲ್ಲ. ಹಾಲಿ ಸೇತುವೆಯ ಕಾಮಗಾರಿಯು ನಡೆಯುತ್ತಿದೆ. ನೀರು ಕಡಿಮೆಯಾದ್ರೆ ಕೆಲಸಕ್ಕೆ ಅನುಕೂಲವಾಗುತ್ತದೆ. ಇದರಿಂದ ನೀರು ಕಡಿಮೆ ಮಾಡಲು ಕೇಳಲಾಗಿದೆ.
ಸಾರಿಗೆ ಸಂಪರ್ಕ ಕೊಂಡಿಯಾಗಲಿದೆ ಈ ಸೇತುವೆ : ಶರಾವತಿ ನದಿಗೆ ನಿರ್ಮಿತವಾಗುವ ಸೇತುವೆ ಹಿನ್ನೀರಿನ ಜನರ ಸಂಪರ್ಕ ಕೊಂಡಿಯಾಗಲಿದೆ. ಶರಾವತಿ ನದಿ ಹಿನ್ನೀರಿನ ಪ್ರದೇಶಗಳ ಜನ ಪಟ್ಟಣಕ್ಕೆ ಹಿನ್ನೀರನ್ನು ದಾಟಿಕೊಂಡು ಸಾಗರದ ಕಡೆ ಬರಬೇಕು. ಹೀಗೆ ಹಿನ್ನೀರನ್ನು ದಾಟಲು ಜನರು ಲಾಂಚ್ ಅವಲಂಬನೆ ಬೇಕಾಗುತ್ತದೆ. ಇದಕ್ಕಾಗಿ ಈ ಭಾಗದ ಜನ ರಾತ್ರಿ ವೇಳೆ ಪಟ್ಟಣಕ್ಕೆ ಬರಲು ಆಗದೆ ಪರದಾಡ ಬೇಕಾಗಿತ್ತು. ತಮಗೆ ಸೇತುವೆ ಬೇಕೆಂದು ಬಹು ದಿನದ ಬೇಡಿಕೆಯನ್ನು ಯಡಿಯೂರಪ್ಪನವರು ಮೊದಲ ಸಲ ಸಿಎಂ ಆದಾಗ ಮಾಡಲು ಆಗದೆ ಹೋದಾಗ, ಯಡಿಯೂರಪ್ಪನವರು ಸಂಸದರಾಗಿ ಆಯ್ಕೆಯಾದಾಗ ಈ ಭಾಗದ ಜನರ ಬೇಡಿಕೆಯಾದ ಸೇತುವೆಗೆ ಕೇಂದ್ರವನ್ನು ಒಪ್ಪಿಸಿ ಹಣವನ್ನು ಬಿಡುಗಡೆಗೊಳಿಸಲು ಯಶಸ್ವಿಯಾದರು.
ಪತ್ರಕ್ಕೆ ಸ್ಥಳೀಯರ ಆಕ್ರೋಶ : ಹಿನ್ನೀರನ್ನು ಕಡಿಮೆ ಮಾಡಿ ಸೇತುವೆ ನಿರ್ಮಾಣ ಮಾಡುವ ಕಂಪನಿಯ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಮುದ್ರದಲ್ಲಿಯೇ ಸೇತುವೆ ನಿರ್ಮಿಸುವಂತಹ ತಂತ್ರಜ್ಞಾನ ಇರುವಲ್ಲಿ ನೀರನ್ನು ಖಾಲಿ ಮಾಡಿ ಸೇತುವೆ ನಿರ್ಮಾಣ ಮಾಡುವುದು ಎಷ್ಟು ಸರಿ ಎಂದು ಸ್ಥಳೀಯರು ಪ್ರಶ್ನೆ ಮಾಡಿದ್ದಾರೆ.
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ