ಶಿವಮೊಗ್ಗ: ಕಾಳಸಂತೆಯಲ್ಲಿ ರೆಮ್ಡೆಸಿವಿರ್ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಎಚ್ಚರಿಕೆ ಸಂದೇಶ ರವಾನಿಸಿದರು.
ಕಾಳಸಂತೆಯಲ್ಲಿ ರೆಮ್ಡೆಸಿವಿರ್ ಇಂಜೆಕ್ಷನ್ ಮಾರಾಟ ಮಾಡುವುದನ್ನು ತಡೆಯಲು ಎಸ್ಪಿ ನೇತೃತ್ವದಲ್ಲಿ ತಂಡಗಳನ್ನು ರಚಿಸಲಾಗಿದೆ. ಅಕ್ರಮ ಮಾರಾಟದಲ್ಲಿ ತೊಡಗಿಸಿಕೊಂಡರೆ ಅಂತವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ 172 ಹಾಗೂ ಖಾಸಗಿ ಆಸ್ಪತ್ರೆಯಲ್ಲಿ 306 ರೆಮ್ಡೆಸಿವಿರ್ ಇಂಜೆಕ್ಷನ್ ಲಭ್ಯವಿದೆ. ಇವುಗಳನ್ನು ಕಾಳಸಂತೆಯಲ್ಲಿ ಮಾರಾಟವಾಗದಂತೆ ಎಚ್ಚರಿಕೆ ವಹಿಸಲಾಗಿದೆ. ಆಕ್ಸಿಜನ್ ಬೇಡಿಕೆ ಪೂರೈಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈಗ ಮೆಗ್ಗಾನ್‍ನಲ್ಲಿ 20 ಕೆಎಲ್ ಸೇರಿದಂತೆ ಒಟ್ಟು 51ಕೆಎಲ್ ಆಕ್ಸಿಜನ್ ಸಂಗ್ರಹಣಾ ಸಮರ್ಥ್ಯವಿದ ಎಂದರು.
ಭದ್ರಾವತಿಯ ವಿಐಎಸ್‍ಎಲ್‍ನಲ್ಲಿ ಗರಿಷ್ಠ ಸಾಮರ್ಥ್ಯದೊಂದಿಗೆ ಆಕ್ಸಿಜನ್ ಉತ್ಪಾದಿಸಲಾಗುತ್ತಿದೆ. ನೆರೆಯ ಚಿಕ್ಕಮಗಳೂರು ಸರ್ಕಾರಿ ಆಸ್ಪತ್ರೆಗೆ ಸಹ ಇಲ್ಲಿಂದ ಆಕ್ಸಿಜನ್ ಪೂರೈಕೆ ಮಾಡಲಾಗುತ್ತಿದೆ. ಒಟ್ಟು 104 ವೆಂಟಿಲೇಟರ್ಗಳು ನಮ್ಮಲ್ಲಿ ಲಭ್ಯವಿದೆ. ತಾಲೂಕು ಆಸ್ಪತ್ರೆಗಳಲ್ಲಿರುವ ಕೆಲವು ವೆಂಟಿಲೇಟರ್ಗಳನ್ನು ಅವಶ್ಯಕತೆಗಳಿಗೆ ಅನುಗುಣವಾಗಿ ಮೆಗ್ಗಾನ್ ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತಿದೆ ಎಂದು ಹೇಳಿದರು.
ಶಿರಾಳಕೊಪ್ಪ ಮತ್ತು ಸೊರಬದಲ್ಲಿ ಒಂದೆರಡು ದಿನಗಳಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸಲು ಸಿದ್ಧತೆ ಮಾಡಲಾಗಿದೆ. ಜಿಲ್ಲೆಯಲ್ಲಿ 10,760 ಕೋವಿಶೀಲ್ಡ್ ಮತ್ತು 320 ಡೋಸ್ ಕೋವ್ಯಾಕ್ಸಿನ್ ಲಭ್ಯವಿದೆ. ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಸಾರ್ವಜನಿಕರ ಸಹಕಾರದಿಂದಾಗಿ ಕೊರೊನಾ ಪ್ರಕರಣಗಳು ಕಡಿಮೆಯಾಗಿವೆ. ಶೇ 45ಕ್ಕಿಂತ ಹೆಚ್ಚು ತಲುಪಿದ್ದ ಪಾಸಿಟಿವ್ ಪ್ರಮಾಣ ಈಗ ಶೇ 40ರ ಆಸುಪಾಸಿಗೆ ಬಂದಿದೆ ಎಂದು ತಿಳಿಸಿದರು.