ಶಿವಮೊಗ್ಗ: ಕೇಂದ್ರ ಚುನಾವಣಾ ಆಯೋಗವು ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ಕೈಗೊಂಡಿದ್ದು, ಸಾರ್ವಜನಿಕರು ಆಯೋಗದೊಂದಿಗೆ ಸಹಕರಿಸುವಂತೆ ಶಿವಮೊಗ್ಗ ಅಪರ ಜಿಲ್ಲಾಧಿಕಾರಿ ಜಿ. ಅನುರಾಧ ಮನವಿ ಮಾಡಿದರು.
ನಗರದ ಸಹ್ಯಾದ್ರಿ ಕಾಲೇಜಿನಲ್ಲಿ ಆಯೋಜಿಸಿದ್ದ ಮತದಾರರ ಪಟ್ಟಿ ಪರಿಷ್ಕರಣೆ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವವನ್ನು ಭದ್ರಗೊಳಿಸಲು ಮತದಾನ ಒಂದು ಮಹತ್ತರ ಕಾರ್ಯವಾಗಿದ್ದು, ಪ್ರತಿಯೊಬ್ಬ ನಾಗರಿಕನೂ ಸಹ ನ್ಯಾಯಯುತವಾದ ಮತದಾನವನ್ನು ಬೆಂಬಲಿಸಬೇಕು ಎಂದರು.
ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಇರುವ ಗೊಂದಲಗಳನ್ನು ಬಗೆಹರಿಸಿಕೊಳ್ಳಲು ಬೂತ್ ಮಟ್ಟದ ಅಧಿಕಾರಿಗಳಿಂದ ಮನೆಮನೆಗೆ ಭೇಟಿ ಕಾರ್ಯವನ್ನು ನವಂಬರ್ 18ರವರೆಗೆ ನಡೆಸಲಾಗುವುದು ಎಂದರು. ಈ ವೇಳೆ, ಆಧಾರ್ ಕಾರ್ಡ್, ಚಾಲನಾ ಪರವಾನಗಿ, ಪಡಿತರ ಚೀಟಿ, ಸರ್ಕಾರಿ ನೌಕರರ ಕಾರ್ಡ್ ಅಥವಾ ಚುನಾವಣಾ ಆಯೋಗ ಅನುಮೋದಿಸಿದ ಯಾವುದಾದರೂ ಒಂದು ದಾಖಲೆಯನ್ನು ನೀಡುವ ಮೂಲಕ ಪರಿಷ್ಕರಿಸಿಕೊಳ್ಳುವಂತೆ ಅವರು ತಿಳಿಸಿದರು.
ತಹಶೀಲ್ದಾರ್ ಕಚೇರಿ, ನಗರಸಭೆ ಹಾಗೂ ಪಾಲಿಕೆಗಳ ಕಚೇರಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡಿಕೊಳ್ಳಲು ಕೇಂದ್ರವನ್ನು ತೆರೆಯಲಾಗಿದ್ದು, ಗ್ರಾಮ ಪಂಚಾಯತ್ ಕಚೇರಿಯಲ್ಲಿಯೂ ಸಹ ಮತದಾರರ ನೋಂದಣಿ ಹಾಗೂ ಪರಿಷ್ಕರಣೆ ಕೇಂದ್ರಗಳು ಕಾರ್ಯನಿರತವಾಗಿವೆ ಎಂದರು. ಇದರೊಂದಿಗೆ ಮತದಾರರು ಎನ್‍ವಿಎಸ್‍ಪಿ ಪೋರ್ಟಲ್ ಮೊಬೈಲ್ ಆಪ್ ಮೂಲಕ ಸ್ವತಃ ಪರಿಷ್ಕರಿಸಿಕೊಳ್ಳಲು ಅವಕಾಶವಿದೆ. ಈ ಎಲ್ಲ ಅವಕಾಶಗಳನ್ನು ಬಳಸಿಕೊಂಡು ಮತದಾರರ ಪಟ್ಟಿಯನ್ನು ಪರಿಷ್ಕರಿಸಿಕೊಳುವಂತೆ ಅವರು ಸಲಹೆ ನೀಡಿದರು.
ಇನ್ನು ಕಾಲೇಜಿನ ಪ್ರಾಂಶುಪಾಲರಾದ ವಾಗ್ದೇವಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದು, ಚುನಾವಣಾ ವಿಭಾಗದ ನೂಡಲ್ ಅಧಿಕಾರಿ ಸಮನ್ವಯ ಕಾಶಿ, ರಿಯಾಜ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.