ಶಿವಮೊಗ್ಗ: ಪ್ರತೀ ವರ್ಷ ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ನಡೆಯುವ ದಸರಾ ಆಚರಣೆಯನ್ನು ಕೊರೊನಾ ಮಹಾಮಾರಿ ಕಾರಣದಿಂದ ಅತ್ಯಂತ ಸರಳವಾಗಿ ಆಚರಿಸಲು ತೀರ್ಮಾನ ಮಾಡಲಾಗಿದೆ. ಅಲ್ಲದೇ ಈ ಬಾರಿ ಕೊರೊನಾ ವಾರಿಯರ್ಸ್ಗಳಿಂದ ದಸರಾ ಉದ್ಘಾಟನೆ ಮಾಡಿಸಲಾಗುವುದು ಎಂದು ಮೇಯರ್ ಸುವರ್ಣ ಶಂಕರ್ ತಿಳಿಸಿದ್ದಾರೆ.
ಈ ಕುರಿತು ಮಾತಮಾಡಿದ ಅವರು, ಕೊರೊನಾ ವಾರಿಯರ್ಸ್ಗಳಾಗಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರು, ನೀರು ಸರಬರಾಜು, ಒಳಚರಂಡಿ, ಪೊಲೀಸ್, ಆರೋಗ್ಯ ಸಿಬ್ಬಂದಿಗಳು ದಸರಾ ಉದ್ಘಾಟನೆ ಮಾಡಲಿದ್ದಾರೆ. ಸರಳ ದಸರಾದ ಕಾರಣ ಈ ಬಾರಿ ಸ್ವಾಗತ ಸಮಿತಿ ಹಾಗೂ ಅಲಂಕಾರ ಸಮಿತಿಗಳನ್ನು ಮಾತ್ರ ರಚನೆ ಮಾಡಲಾಗಿದೆ. ಮೇಯರ್ ಸುವರ್ಣ ಶಂಕರ್ ಸ್ವಾಗತ ಸಮಿತಿಯ ಅಧ್ಯಕ್ಷರಾಗಲಿದ್ದಾರೆ. ಅಲಂಕಾರ ಸಮಿತಿಗೆ ವಿರೋಧ ಪಕ್ಷದ ನಾಯಕ ಹೆಚ್.ಸಿ. ಯೋಗೀಶ್ ಅವರು ಅಧ್ಯಕ್ಷರಾಗಲಿದ್ದಾರೆ ಎಂದು ತಿಳಿಸಿದರು.
ಈ ಬಾರಿ ದಸರಾದ ಬನ್ನಿ ಮುಡಿಯುವ ಕಾರ್ಯಕ್ರಮಕ್ಕೆ ನಗರದ ಮುಜರಾಯಿ ಇಲಾಖೆಗೆ ಸೇರ್ಪಡೆಯಾದ ಕೋಟೆ ಸೀತಾರಾಮಾಂಜನೇಯ, ಕೋಟೆ ಚಂಡಿಕಾ ದುರ್ಗಾ ಪರಮೇಶ್ವರಿ, ಲಕ್ಷ್ಮಿ ನಾರಾಯಣ, ಭವಾನಿ ಶಂಕರ, ಕೋಟೆ ಭೀಮೇಶ್ವರ ಹಾಗೂ ಆದಿ ರಂಗನಾಥ ದೇವತೆಗಳು ಮಾತ್ರ ಬನ್ನಿ ಭಾಗಿಯಾಗಲಿವೆ. ಉಳಿದಂತೆ ನಗರದ ಬೇರೆ ದೇವತೆಗಳ ಪ್ರವೇಶಕ್ಕೆ ಅವಕಾಶ ನೀಡಿಲ್ಲ. ನಗರದ 124 ದೇವಾಲಯಗಳಿಗೆ ಪ್ರೋತ್ಸಾಹ ಧನ ನೀಡಲಾಗುತ್ತದೆ ಎಂದರು.
ಪ್ರತಿ ವರ್ಷ ವಿವಿಧ ದಸರಾ ಸಮಿತಿಗಳನ್ನು ರಚನೆ ಮಾಡಲಾಗುತ್ತಿತ್ತು. ಇದಕ್ಕಾಗಿ 1.63 ಕೋಟಿ ರೂ. ಖರ್ಚು ಮಾಡಲಾಗುತ್ತಿತ್ತು. ಈ ಬಾರಿ 38 ಲಕ್ಷ ರೂ. ಖರ್ಚು ಮಾಡಲಾಗುತ್ತಿದೆ ಎಂದು ಮೇಯರ್ ಸುವರ್ಣ ಶಂಕರ್ ತಿಳಿಸಿದ್ದಾರೆ.