ಶಿವಮೊಗ್ಗ: ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ರಾಜಕೀಯ ನಿವೃತ್ತಿ ಘೋಷಣೆ ಹಿನ್ನೆಲೆ ಶಿವಮೊಗ್ಗ ನಗರದ 15 ಬಿಜೆಪಿ ಪಾಲಿಕೆ ಸದಸ್ಯರು ಬಿಜೆಪಿ ಘಟಕದ ಜವಾಬ್ದಾರಿಗಳಿಗೆ ಸಾಮೂಹಿಕ ರಾಜಿನಾಮೆ ನೀಡಿದ್ದಾರೆ. ರಾಜೀನಾಮೆ ಸಲ್ಲಿಸಿದ ನಂತರ ಯಡಿಯೂರಪ್ಪ ಅವರನ್ನು ಭೇಟಿ ಮಾಡಲು ಬೆಂಗಳೂರಿಗೆ ಪ್ರಯಾಣ ಬೆಳಸಿದ್ದಾರೆ.
ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷವನ್ನು ಹುಟ್ಟುಹಾಕಿ, ಪಕ್ಷ ಈ ಮಟ್ಟದ ಎತ್ತರಕ್ಕೆ ಬೆಳೆಯಲು ಕಾರಣರಾದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ದಿ. ಅನಂತ್ ಕುಮಾರ್, ಹಾಗೂ ಕೆ.ಎಸ್ ಈಶ್ವರಪ್ಪ ಅವರು ಅಗ್ರಮಾನ್ಯರಾಗಿದ್ದಾರೆ. ಈಶ್ವರಪ್ಪ ಅವರು ತಮ್ಮದೇ ವಿಶಿಷ್ಟವಾದ ವ್ಯಕ್ತಿತ್ವ ಹಾಗೂ ವರ್ಚಸ್ಸಿನ ಮೂಲಕ ಇಡೀ ರಾಜ್ಯಾದ್ಯಂತ ಪಕ್ಷ ಸಂಘಟಿಸಿದ್ದಾರೆ. ಅಲ್ಲದೇ, ಹಲವು ಬಾರಿ ಶಿವಮೊಗ್ಗ ನಗರದ ಶಾಸಕರಾಗಿ, ರಾಜ್ಯ ಸರ್ಕಾರದ ಮಂತ್ರಿಯಾಗಿ ವಿವಿಧ ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.
ಇಂತಹ ಜನಪ್ರಿಯ ಹಾಗೂ ಕ್ರೀಯಾಶೀಲ ನಾಯಕರನ್ನು ವಯಸ್ಸಿನ ನೆಪ ಮುಂದಿಟ್ಟುಕೊಂಡು ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿವೃತ್ತಿ ಘೋಷಣಾ ಪತ್ರವನ್ನು ಪಡೆದುಕೊಂಡ ಕೇಂದ್ರ ಬಿಜೆಪಿ ವರಿಷ್ಠರ ನಿರ್ಧಾರವು ಅತ್ಯಂತ ಆಘಾತಕಾರಿಯಾಗಿದೆ ಎಂದು ಮಹಾನಗರ ಪಾಲಿಕೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಸುಳ್ಯದಲ್ಲಿ ಬಿಜೆಪಿ ಅಭ್ಯರ್ಥಿ ಘೋಷಣೆ: ರಾಜಕೀಯ ನಿವೃತ್ತಿ ಪಡೆದ ಎಸ್ ಅಂಗಾರ..
ಬೇರೆ ಬೇರೆ ಕ್ಷೇತ್ರದಲ್ಲಿ ಇದೇ ವಯಸ್ಸಿನ ಇತರ ನಾಯಕರಿಗೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡಲಾಗಿದೆ. ಕೆ.ಎಸ್ ಈಶ್ವರಪ್ಪ ಅವರಿಗೆ ಮಾತ್ರ ಟಿಕೆಟ್ ನೀಡದೇ ದ್ವಂದ್ವ ನೀತಿ ಅನುಸರಿಸಲಾಗಿದೆ. ನಮ್ಮಂತಹ ಅನೇಕ ನಾಯಕರನ್ನು ಪಕ್ಷದಲ್ಲಿ ಗುರುತಿಸಿ, ಬೆಳಸಿದ ಕೆ.ಎಸ್ ಈಶ್ವರಪ್ಪ ಅವರನ್ನು ಪಕ್ಷ ನಡೆಸಿಕೊಂಡ ರೀತಿ ನಿಜಕ್ಕೂ ಕಳವಳ ತಂದಿದೆ. ಈ ಅನಿರೀಕ್ಷಿತ ಬೆಳವಣಿಗೆ ಖಂಡಿಸಿ ಶಿವಮೊಗ್ಗ ಮಹಾನಗರ ಪಾಲಿಕೆಯ ಸದಸ್ಯರಾದ ನಾವೆಲ್ಲರೂ ಭಾರತೀಯ ಜನತಾ ಪಕ್ಷ ಶಿವಮೊಗ್ಗ ನಗರ ಘಟಕ ನಮಗೆ ವಹಿಸಿರುವ ಪಕ್ಷದ ಎಲ್ಲಾ ಜವಾಬ್ದಾರಿಗಳಿಗೆ ಸಾಮೂಹಿಕ ರಾಜೀನಾಮೆಯನ್ನು ನಗರ ಬಿಜೆಪಿ ಘಟಕದ ಅಧ್ಯಕ್ಷ ಜಗದೀಶ್ ಅವರಿಗೆ ಸಲ್ಲಿಸಿದ್ದೇವೆ ಎಂದು ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಪಾಲಿಕೆ ಮೇಯರ್ ಶಿವಕುಮಾರ್, "ಬಿಜೆಪಿ ಪಕ್ಷದಿಂದಲೆ ಈಶ್ವರಪ್ಪ ಅವರಿಗೆ ಟಿಕೆಟ್ ನೀಡಬೇಕು. ಎರಡನೇ ಪಟ್ಟಿಯಲ್ಲಿ ಅವರ ಹೆಸರನ್ನು ಘೋಷಿಸದೇ ಹೋದರೆ, ಪಾಲಿಕೆ ಸದಸ್ಯರಾದ ನಾವೆಲ್ಲ ಸಾಮೂಹಿಕ ರಾಜೀನಾಮೆ ನೀಡುತ್ತೇವೆ. ಚುನಾವಣೆಯಲ್ಲಿ ಕೆಲಸವನ್ನು ಮಾಡುವುದಿಲ್ಲ" ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ: ಪುತ್ರಿ ಬಿಜೆಪಿ ಸೇರ್ಪಡೆಗೆ ಕಾಗೋಡು ತಿಮ್ಮಪ್ಪ ಅಸಮಾಧಾನ
ಮಾಜಿ ಮೇಯರ್ ಶಂಕರ್ ಗನ್ನಿ ಮಾತನಾಡಿ, "ಯಡಿಯೂರಪ್ಪ ಅವರನ್ನು ಭೇಟಿ ಮಾಡಲು ಬೆಂಗಳೂರಿಗೆ ಹೋರಟ್ಟಿದ್ದೇವೆ. ನಮ್ಮ ಕೂಗನ್ನು ಕೇಳುವವರು ಯಡಿಯೂರಪ್ಪ ಮಾತ್ರ, ನಾವು ಬೆಂಗಳೂರಿಗೆ ಹೋಗುತ್ತೇವೆ ಅಂದಾಗ ಈಶ್ವರಪ್ಪ ನಮಗೆ ಕೆಟ್ಟ ಹೆಸರು ತರಬೇಡಿ ಎಂದು ಬೈದರು. ನಾವು ಅಂದುಕೊಂಡಂತೆ ಯಾವುದು ಸರಿಯಾಗಿ ನಡೆಯುತ್ತಿಲ್ಲ. ಇದರಿಂದ ಪಾಲಿಕೆ ಸದಸ್ಯರೆಲ್ಲಾ ಸೇರಿ ಬೆಂಗಳೂರಿಗೆ ಹೊರಟಿದ್ದೇವೆ" ಎಂದು ಹೇಳಿದರು.
ಇದನ್ನೂ ಓದಿ: ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ ಕೆ.ಎಸ್. ಈಶ್ವರಪ್ಪ..! ನಡ್ಡಾಗೆ ಪತ್ರ