ಶಿವಮೊಗ್ಗ : ಜಿಲ್ಲೆಯ ಡಿ.ಜಿ. ಪರಶುರಾಮ್ ಎಂಬವರು ನ್ಯಾಚುರಲ್ ಸ್ಟ್ರಾಂಗ್ ಪವರ್ ಲಿಫ್ಟಿಂಗ್ ಫೆಡರೇಷನ್ ವತಿಯಿಂದ ಹರಿಯಾಣದ ಸೋನಿಪತ್‌ನಲ್ಲಿ ಆಯೋಜಿಸಿದ್ದ ಬೆಂಚ್ ಪ್ರೆಸ್ ಹಾಗೂ ಡೆಡ್ ಲಿಫ್ಟ್ನ ಮಾಸ್ಟರ್ 2 ವಿಭಾಗದ 90 ಕೆಜಿ ಪ್ರತ್ಯೇಕ ಸ್ಪರ್ಧೆಯಲ್ಲಿ ಭಾಗವಹಿಸಿ 2 ಚಿನ್ನದ ಪದಕ ಗಳಿಸಿದ್ದಾರೆ.
ಸ್ಫರ್ಧೆ ಆರಂಭಕ್ಕೂ ಕೆಲ ತಿಂಗಳ ಹಿಂದೆಯಷ್ಟೇ ಪರಶುರಾಮ್ ಅವರಿಗೆ ಕೋವಿಡ್ ತಗುಲಿತ್ತು. ಆಸ್ಪತ್ರೆ ಸೇರಿದ್ದ ಅವರು, ದೇಹದ ತೂಕ ಸಹ ಕಳೆದುಕೊಂಡಿದ್ದರು. ಕೋವಿಡ್ ಮುಕ್ತರಾದ ಬಳಿಕ ಶಿವಮೊಗ್ಗದ ನೆಹರೂ ಕ್ರೀಡಾಂಗಣದಲ್ಲಿರುವ ವ್ಯಾಯಾಮ ಶಾಲೆಯಲ್ಲಿ ಸತತ ಅಭ್ಯಾಸ ಮಾಡಿ, ಸ್ಫರ್ಧೆಗೆ ತೆರಳಿದ್ದ ಅವರು ಈ ಸಾಧನೆ ಮಾಡಿದ್ದಾರೆ.
ಪರಶುರಾಮ್ ಅವರ ಸಾಧನೆಯನ್ನು ಗುರುತಿಸಿ, ನ್ಯಾಚುರಲ್ ಸ್ಟ್ರಾಂಗ್ ಫವರ್ ಲಿಫ್ಟಿಂಗ್ ಫೆಡರೇಷನ್‌ನ ದಕ್ಷಿಣ ಭಾರತ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಅಲ್ಲದೆ, ಅವರು ರಾಷ್ಟ್ರೀಯ ತೀರ್ಪುಗಾರರಾಗಿಯೂ ಅನೇಕ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದಾರೆ. ನ್ಯಾಚುರಲ್ ಸ್ಟ್ರಾಂಗ್ ಫವರ್ ಲಿಫ್ಟಿಂಗ್ ಫೆಡರೇಷನ್ ನಡೆಸಿದ ಇದೇ ಸ್ಪರ್ಧೆಯಲ್ಲಿ ಶಿವಮೊಗ್ಗದ ಮತ್ತೋರ್ವ ಕ್ರೀಡಾಪಟು ಕೆ.ಬಿ ಮಂಜುನಾಥ್ ಕೂಡ ಭಾಗವಹಿಸಿ ಬೆಳ್ಳಿ ಪದಕ ಪಡೆದಿದ್ದಾರೆ. ಮಂಜುನಾಥ್ ಅವರು 82.5 ಕೆ.ಜಿ. ಮಾಸ್ಟರ್ 1 ವಿಭಾಗದಲ್ಲಿ ಈ ಸಾಧನೆ ಮಾಡಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.