ಶಿವಮೊಗ್ಗ: ನಮ್ಮ ಪೂರ್ವಜರು ಚಾಲ್ತಿಗೆ ತಂದಿರುವ ಎಲ್ಲ ಆಚರಣೆಗಳನ್ನು ಮೌಢ್ಯ ಎಂದು ಹೇಳಲು ಸಾಧ್ಯವಿಲ್ಲ. ಹೆಚ್ಚಿನ ಆಚರಣೆಗಳ ಹಿಂದೆ ಒಂದಿಲ್ಲೊಂದು ವೈಜ್ಞಾನಿಕ ಕಾರಣಗಳು ಇವೆ. ಇಂತಹ ಒಂದು ವೈಜ್ಞಾನಿಕ ಆಚರಣೆಯೇ ಹೊರಬೀಡು.
ಕೊರೊನಾ ಆವರಿಸಿದ್ದರಿಂದ ಕಳೆದ ಒಂದು ವರ್ಷದಿಂದ ಜಗತ್ತೇ ಸಂಕಷ್ಟಕ್ಕೆ ಸಿಲುಕಿದೆ. ಈ ಹಿಂದೆಯೂ ಹಲವು ಸಾಂಕ್ರಾಮಿಕ ರೋಗಗಳು ಬಂದು ಸಾವಿರಾರು ಮಂದಿ ಜೀವ ಕಳೆದುಕೊಳ್ಳುತ್ತಿದ್ದರು. ಇಂತಹ ಸಾಂಕ್ರಾಮಿಕ ರೋಗಗಳಿಂದ ದೂರ ಇರುವ ಉದ್ದೇಶದಿಂದ, ನಮ್ಮ ಪೂರ್ವಜರು ಕಂಡುಕೊಂಡ ಮಾರ್ಗವೇ ಹೊರಬೀಡು ಆಚರಣೆ.
ಶಿವಮೊಗ್ಗ ತಾಲೂಕಿನ ಮಂಡಘಟ್ಟ ಎಂಬ ಹಳ್ಳಿಯ ಜನರು ಪ್ರತಿ ಮೂರು ವರ್ಷಕ್ಕೊಮ್ಮೆ ಸೂರ್ಯ ಮೂಡುವ ಮೊದಲೇ ತಮ್ಮ ಸಾಕು ಪ್ರಾಣಿಗಳಾದ ಜಾನುವಾರು, ಕುರಿ, ಕೋಳಿ, ನಾಯಿಗಳೊಂದಿಗೆ ಊರು ಖಾಲಿ ಮಾಡುತ್ತಾರೆ. ಊರಿಗೆ ಯಾರೂ ಪ್ರವೇಶಿಸಬಾರದು ಎಂಬ ಉದ್ದೇಶದಿಂದ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಬೇಲಿ ಹಾಕಿ ದಿಗ್ಬಂಧನ ಹೇರಲಾಗುತ್ತದೆ. ಬಳಿಕ ಜನರು ತಮ್ಮ ಜಾನುವಾರುಗಳೊಂದಿಗೆ ಜಮೀನಿಗೆ ತೆರಳಿ ಅಲ್ಲಿಯೇ ಒಂದು ದಿನ ವಾಸ್ತವ್ಯ ಹೂಡುತ್ತಾರೆ.
ಹಿಂದೆ ಸಾಂಕ್ರಾಮಿಕ ರೋಗಗಳಾದ ಮಲೇರಿಯಾ, ಪ್ಲೇಗ್ ಬಂದು ಸಾವಿರಾರು ಮಂದಿ ಮೃತಪಡುತ್ತಿದ್ದರು. ಆಗ ಜನರು ತಮ್ಮ ಊರನ್ನು ತೊರೆದು ಜಮೀನು ಗಳಲ್ಲಿ ವಾಸ್ತವ್ಯ ಹೂಡುತ್ತಿದ್ದರು. ಊರಿನಲ್ಲಿ ಯಾವ ಪ್ರಾಣಿಗಳೂ ಇಲ್ಲದಿರುವ ಕಾರಣಕ್ಕೆ ಸಾಂಕ್ರಾಮಿಕ ರೋಗಗಳು ತನ್ನಿಂತಾನೆ ತಗ್ಗುತ್ತಿತ್ತು. ಯಾರಾದರೂ ಊರಿನಲ್ಲಿ ಉಳಿದರೆ ಕಷ್ಟ ಎನ್ನುವ ಕಾರಣಕ್ಕೆ, ಅಂದು ತಮ್ಮ ಜಮೀನಲ್ಲಿ ಮಾರಮ್ಮನ ಆರಾಧನೆ ಆರಂಭಿಸಿದ್ದರು. ಶತಮಾನಗಳ ಹಿಂದೆ ಆರಂಭಗೊಂಡ ಈ ಆಚರಣೆಯನ್ನು ಇಂದಿಗೂ ಮಂಢಘಟ್ಟದ ಜನರು ನಡೆಸಿ ಕೊಂಡು ಬರುತ್ತಿದ್ದಾರೆ.
ಈ ಬಾರಿಯೂ ಜನ ಬೆಳ್ಳಂ ಬೆಳಗ್ಗೆಯೇ ತಮ್ಮ ಮನೆಗಳನ್ನು ತೊರೆದು ಊರಿನಿಂದ ಹೊರಗಿರುವ ಜಮೀನಿನಲ್ಲಿ ಸೇರಿ, ಅಲ್ಲಿಯೇ ಅಡುಗೆ ಮಾಡಿ ಊಟ ಮಾಡಿದರು. ಅಲ್ಲದೆ, ಸ್ಥಳದಲ್ಲಿಯೇ ಮಾರಮ್ಮನ ಮೂರ್ತಿ ಸ್ಥಾಪಿಸಿ ಗದ್ದುಗೆಯಲ್ಲಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ರಾತ್ರಿಯಾದ ಮೇಲೆ ತಮ್ಮ ಮನೆಗಳಿಗೆ ತೆರಳಿ ವಿಶಿಷ್ಟ ಆಚರಣೆಗೆ ಅಂತ್ಯ ಹಾಡಿದರು.