ಶಿವಮೊಗ್ಗ: ಲಿಂಗನಮಕ್ಕಿ ಅಣೆಕಟ್ಟೆಯಿಂದ ಶರಾವತಿ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುವ ಯೋಜನೆಯನ್ನು ಕೈ ಬಿಡಬೇಕುವಂತೆ ಆಗ್ರಹಿಸಿ ಜೂನ್ 27ರಂದು ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಲೆನಾಡಿನ ಜೀವ ಜಲ ಹೋರಾಟ ಸಮಿತಿ ಸಂಚಾಲಕ ಅಶೋಕ್ ಗಾಂಧಿ ಹೇಳಿದರು.
ಇಲ್ಲಿನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಮಲೆನಾಡು ಬಯಲು ಸೀಮೆಯಂತೆ ಆಗುತ್ತಿದೆ. ಶರಾವತಿ ನೀರನ್ನು ಸಾಗಿಸುವುದು ಅವೈಜ್ಞಾನಿಕ ಕ್ರಮ. ಇಂಥ ಕೆಲಸಕ್ಕೆ ₹12 ಸಾವಿರ ಕೋಟಿ ವೆಚ್ಚ ಮಾಡುತ್ತಿರುವುದು ದುರಂತವೇ ಸರಿ ಎಂದರು.
ಯೋಜನೆಯನ್ನು ಕೈ ಬಿಟ್ಟು ಮಲೆನಾಡನ್ನು ಉಳಿಸಬೇಕು. 27ರಂದು ನಗರದ ಗೋಪಿ ವೃತ್ತದಿಂದ ಡಿಸಿ ಕಚೇರಿವರೆಗೂ ಪ್ರತಿಭಟನಾ ಮರವಣಿಗೆ ನಡೆಸಿ ಮನವಿ ಸಲ್ಲಿಸಲಾಗುವುದು, ಎಲ್ಲಾ ಸಂಘ, ಸಂಸ್ಥೆಗಳಿಂದ ಪ್ರತ್ಯೇಕ ಮನವಿಗಳನ್ನು ಸಲ್ಲಿಸುವ ಮೂಲಕ ವಿನಂತಿ ಪೂರ್ವಕ ಎಚ್ಚರಿಕೆ ನೀಡಲಾಗುವುದು ಎಂದು ಹೇಳಿದರು.
ಪ್ರತಿಭಟನಾ ಮೆರವಣಿಗೆಯಲ್ಲಿ ನಾಗರಿಕರು, ವಿವಿಧ ಸಂಘ ಸಂಸ್ಥೆಗಳು ಭಾಗಿಯಾಗಬೇಕು ಎಂದು ವಿನಂತಿಸಿಕೊಂಡರು. ರೈತ ಸಂಘದ ಕೆ.ಟಿ.ಗಂಗಾಧರ್, ವಿಜ್ಞಾನ ಸಂಘದ ಶೇಖರ್ ಗೌಳೇರ್ ಸೇರಿದಂತೆ ಕನ್ನಡ ಪರ ಸಂಘಟನೆಯವರು ಇದ್ದರು.