ಶಿವಮೊಗ್ಗ : ಲಾಭದಾಯಕ ಕೃಷಿ ಎಂದು ಶ್ರೀಗಂಧದ ಬೆಳೆ ಬೆಳೆದ ಶಿವಮೊಗ್ಗದ ಕೆಲ ರೈತರು ಇದೀಗ ಇನ್ನಿಲ್ಲದ ಸಮಸ್ಯೆ ಎದುರಿಸುತ್ತಿದ್ದಾರೆ. ಅಷ್ಟು-ಇಷ್ಟು ಸಾಲ ಮಾಡಿ ಭೂಮಿ ತೆಗೆದುಕೊಂಡು ಶ್ರೀಗಂಧ ಹಾಕಿದ್ದ ರೈತರು ತಾವು ಬೆಳೆದ ಬೆಳೆಯನ್ನು ಇದೀಗ ಉಳಿಸಿಕೊಳ್ಳಲು ಹರಸಾಹಸಪಡುತ್ತಿದ್ದಾರೆ.
ಶಿವಮೊಗ್ಗದ ಸುತ್ತುಕೋಟೆಯ ಹಲವೆಡೆ ಭಾರಿ ಪ್ರಮಾಣದಲ್ಲಿ ಶ್ರೀಗಂಧ ಕಳ್ಳರು ಮರವನ್ನು ಕಡಿದುಕೊಂಡು ಹೋಗುತ್ತಿದ್ದು ಇದರಿಂದ ಬೆಳಗಾರನ ಬದುಕು ಬೀದಿಗೆ ಬರಲಾರಂಭಿಸಿದೆ. ಸುತ್ತುಕೋಟೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಶ್ರೀಗಂಧ ಬೆಳೆದಿರುವ ಇಲ್ಲಿನ ರೈತರು ಇದೀಗ ಕಳ್ಳರಿಂದ ತಮ್ಮ ಮರಗಳನ್ನು ಉಳಿಸಿಕೊಳ್ಳಲು ಹರಸಾಹಸ ಪಡುವಂತಾಗಿದೆ. ಹಲವೆಡೆ ಕಳ್ಳರ ಕಾಟ ಹೆಚ್ಚಾಗಿದ್ದರಿಂದ ರೈತರು ಬೇಸತ್ತು ಹೋಗಿದ್ದಾರೆ.
ತೋಟದ ಮಾಲೀಕನ ಅಳಲು:
ನಾವು ಇದೀಗ 9 ಎಕರೆ ಭೂಮಿಯಲ್ಲಿ ಶ್ರೀಗಂಧ ಬೆಳೆದ್ದೇವೆ. ಸುಮಾರು 8 ವರ್ಷದಿಂದ ಇದೇ ಬೆಳೆಯನ್ನು ಬೆಳೆಯುತ್ತಿದ್ದೇವೆ. ಆದರೆ, ಈಗ ಕಳ್ಳರ ಕಾಟ ಹೆಚ್ಚಾಗಿದ್ದರಿಂದ ಶ್ರೀಗಂಧದ ಮರಗಳನ್ನು ಉಳಿಸಿಕೊಳ್ಳಲು ಹರಸಾಹಸ ಪಡುವಂತಾಗಿದೆ. ನಮ್ಮ ತೋಟದಲ್ಲಿ ಪ್ರತಿನಿತ್ಯ 5 ರಿಂದ10 ಶ್ರೀಗಂಧ ಮರಗಳನ್ನು ಕಳ್ಳರು ಕತ್ತರಿಸಿಕೊಂಡು ಹೋಗುತ್ತಿದ್ದಾರೆ. ಮರದ ರಕ್ಷಣೆಗೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ತೆಗೆದುಕೊಂಡರೂ ಸಹ ಮರಗಳನ್ನು ಉಳಿಸುತ್ತಿಲ್ಲ. ಇವರಿಂದ ನಮಗೆ ಸಾಗಿದೆ ಎನ್ನುತ್ತಾರೆ ಸುತ್ತುಕೋಟೆಯ ಶ್ರೀಗಂಧದ ಮರಗಳ ತೋಟದ ಮಾಲೀಕ ಲೋಕೇಶ್ವರ್.
ಅತ್ಯಾಧುನಿಕ ಕಟಿಂಗ್ ಮೆಷಿನ್ ಬಳಸಿ ಕಳ್ಳತನ:
ಮೂಲತಃ ಶಿಕಾರಿಪುರದವರಾದ ಲೋಕೇಶ್ವರ್, ಈ ಹಿಂದೆ ತಮ್ಮ ಗ್ರಾಮದ ಅರಣ್ಯದಲ್ಲಿದ್ದ ಗಂಧವನ್ನು ನೋಡಿ ತಾವು ಏಕೆ ಶ್ರೀಗಂಧ ಬೆಳೆಯಬಾರದು ಎಂಬ ಆಲೋಚನೆಯಿಂದ ಭೂಮಿ ಖರೀದಿಸಿ ಶ್ರೀಗಂಧ ಬೆಳೆಯುತ್ತಿದ್ದಾರೆ. ಆದರೆ, ಶ್ರೀಗಂಧದ ರಕ್ಷಣೆ ಬಲು ಕಷ್ಟ. ಕರುನಾಡನ್ನು ಗಂಧದ ನಾಡು, ಚೆಂದದ ಬೀಡು ಅಂತ ಕರೆಯುತ್ತಾರೆ. ಇಂತಹ ಕರುನಾಡಲ್ಲಿ ಶ್ರೀಗಂಧ ಬೆಳೆದು ಕುಬೇರರಾಗುವ ಕನಸಿಗೆ ಕಳ್ಳರು ಕೊಡಲಿ ಪೆಟ್ಟು ನೀಡುತ್ತಿದ್ದಾರೆ.
ಬೆಳೆ ರಕ್ಷಣೆಗಾಗಿ ಜನರನ್ನು ಕಾವಲಿಗಿಟ್ಟು, ನಾಯಿಗಳನ್ನು ಸಾಕಿದರೂ ಸಹ ಕಳ್ಳರು ಎಲ್ಲರನ್ನು ಯಾಮಾರಿಸಿ ಅತ್ಯುಧುನಿಕ ಕಟಿಂಗ್ ಮೆಷಿನ್ ಬಳಸಿ ಗಂಧವನ್ನು ಕದ್ದು ತೆಗೆದುಕೊಂಡು ಹೋಗುತ್ತಿದ್ದಾರೆ. ಈ ಸಮಯದಲ್ಲಿ ನಾವು ಕಂಡರೆ ಕಲ್ಲಿನಲ್ಲಿ ಹೊಡೆದು ಓಡಿಸಿಬಿಡುತ್ತಾರೆ. ಹೆಚ್ಚಾಗಿ ಕಳ್ಳರು ಬೆಳಗಿನ ಜಾವ 2 ಗಂಟೆಯಿಂದ 4 ಗಂಟೆ ಒಳಗೆ ಬಂದು ತಮ್ಮ ಕೆಲಸವನ್ನು ಸಲೀಸಾಗಿ ಮುಗಿಸಿಕೊಂಡು ಹೋಗುತ್ತಿದ್ದಾರೆ ಎನ್ನುತ್ತಾರೆ ತೋಟದ ಕೆಲಸಗಾರ ಶಂಕರ್.
ಸಣ್ಣ ಮರಗಳ ಕಟಾವು:
ಶ್ರೀಗಂಧ ಮರ ಸುಮಾರು ನಾಲ್ಕೈದು ವರ್ಷದ ನಂತರ ಅದರ ಬುಡ ದಪ್ಪಗಾಗಿ ಬೆಳೆಯಲು ಪ್ರಾರಂಭಿಸುತ್ತದೆ. ಒಳಗೆ ಕಪ್ಪು ಬಣ್ಣದಲ್ಲಿ ಕಾಂಡ ಬೆಳೆಯಲು ಆರಂಭಿಸುತ್ತದೆ. ಇದನ್ನೇ ನೋಡಿ ಕಳ್ಳರು ಮರ ಕಡಿದುಕೊಂಡು ಹೋಗುತ್ತಿದ್ದಾರೆ. ಪ್ರತಿ ಕೆ.ಜಿಗೆ 15 ಸಾವಿರ ರೂ. ಮಾರುಕಟ್ಟೆಯಲ್ಲಿ ಸೇಲ್ ಮಾಡುತ್ತಾರೆ. ಇತ್ತೀಚೆಗೆ ಮರದ ಬುಡ ಬಿಳಿ ಇದ್ದರೂ ಸಹ ಅದನ್ನು ಕಟಾವು ಮಾಡಿಕೊಂಡು ಹೋಗುತ್ತಿದ್ದಾರೆ ಎನ್ನಲಾಗುತ್ತಿದೆ.
ನಮ್ಮ ತೋಟದಲ್ಲಿ ಕಳೆದ ಒಂದು ತಿಂಗಳಿನಿಂದ 500 ಕ್ಕೂ ಅಧಿಕ ಗಂಧದ ಮರಗಳನ್ನು ಕಟಾವು ಮಾಡಿದ್ದಾರೆ. ಇದರಿಂದ ಕೋಟ್ಯಂತರ ರೂ. ನಷ್ಟವಾಗಿದೆ. ಅರಣ್ಯ ಇಲಾಖೆಯವರು ಶ್ರೀಗಂಧ ಬೆಳೆಯಲು ಪ್ರೋತ್ಸಾಹ ನೀಡಿದರೆ, ಪೊಲೀಸ್ ಇಲಾಖೆಯವರು ಗಂಧದ ಮರಗಳ್ಳರನ್ನು ಹಿಡಿಯದೇ ಸತಾಯಿಸುತ್ತಿದ್ದಾರೆ ಎಂದು ಲೋಕೇಶ್ವರ್ ಅಳಲು ತೋಡಿಕೊಂಡಿದ್ದಾರೆ.