ಶಿವಮೊಗ್ಗ: ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ರೌಡಿಶೀಟರ್ನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಶಿವಮೊಗ್ಗ ಹೊರ ವಲಯದ ಬಸವನಗಂಗೂರು ಬಳಿಯ ತುಂಗಾ ಮೇಲ್ಡಂಡೆ ಕಾಲುವೆಯ ಸೇತುವೆ ಬಳಿ ನಾಗೇಶ ಅಲಿಯಾಸ್ ನವಲೆ ನಾಗೇಶನನ್ನು (30) ಭೀಕರವಾಗಿ ಕೊಲೆ ಮಾಡಲಾಗಿದೆ. ನಾಗೇಶ್ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದು, ರೌಡಿ ಶೀಟರ್ ಆಗಿದ್ದ.
ನಿನ್ನೆ ರಾತ್ರಿ ಮನೆಯಲ್ಲಿದ್ದ ನಾಗೇಶನನ್ನು ಕೆಲ ಯುವಕರು ಬಂದು ಕರೆದುಕೊಂಡು ಹೋಗಿದ್ದರಂತೆ. ಆದರೆ ಬೆಳಗ್ಗೆ ಆಗುವಷ್ಟರಲ್ಲಿ ಕೊಲೆ ಮಾಡಲಾಗಿದೆ. ಕೆಲ ತಿಂಗಳ ಹಿಂದೆ ಇದೇ ನವಲೆಯ ಸಿದ್ದಾರ್ಥ ಎಂಬ ರೌಡಿಶೀಟರ್ ಕುಡಿದ ಮತ್ತಿನಲ್ಲಿ ಬಿಲ್ಡಿಂಗ್ ಮೇಲಿಂದ ಬಿದ್ದು ಸಾವನಪ್ಪಿದ್ದ. ಇದಕ್ಕೆ ನಾಗೇಶನೇ ಕಾರಣ ಎಂದು ಹೇಳಲಾಗಿತ್ತು. ಇದೇ ದ್ವೇಷದಿಂದ ಸಿದ್ದನ ಗೆಳೆಯರು ಕೊಲೆ ಮಾಡಿರಬಹುದು ಎಂಬ ಆರೋಪ ಕೇಳಿಬರುತ್ತಿದೆ. ಅಲ್ಲದೇ ಹುಡುಗಿಯ ಜೊತೆ ಲವ್ ಅಫೇರ್ ಸಹ ಇತ್ತು ಎನ್ನಲಾಗಿದೆ.
ಈ ಕುರಿತು ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.