ಶಿವಮೊಗ್ಗ: ಇಲ್ಲಿನ ನಟೋರಿಯಸ್ ರೌಡಿ ಶೀಟರ್ ಬಚ್ಚನ್ ಅಲಿಯಾಸ್ ಬಚ್ಚಾ ಹಾಗೂ ಆತನ ಮೂವರು ಸಹಚರರು ನಿನ್ನೆ ರಾತ್ರಿ ಶಿವಮೊಗ್ಗದ ಸೆಂಟ್ರಲ್ ಜೈಲ್ನಲ್ಲಿ ಪಿನಾಯಿಲ್ ಕುಡಿದು ವಿಷ ಕುಡಿದಂತೆ ಹೈಡ್ರಾಮಾ ನಡೆಸಿದ್ದಾರೆ.
ಬಚ್ಚಾ ಹಾಗೂ ಆತನ ಸಹಚರರಾದ ನಾಸಿರ್, ಇಮ್ರಾನ್ ಹಾಗೂ ಶೋಯಬ್ ಅವರು ನಿನ್ನೆ ರಾತ್ರಿ ಜೈಲಿನಲ್ಲಿನ ಶೌಚಾಲಯದಲ್ಲಿ ಇರಿಸಿದ್ದ ಪಿನಾಯಿಲ್ ಕುಡಿದು ವಿಷ ಕುಡಿದವರಂತೆ ಒದ್ದಾಡಿ, ಜೈಲ್ನಲ್ಲಿ ಹೈಡ್ರಾಮಾ ಸೃಷ್ಟಿಸಿದ್ದಾರೆ. ಇದರಿಂದ ಗಲಿಬಿಲಿಗೊಂಡ ಜೈಲಿನ ಸಿಬ್ಬಂದಿ ತಕ್ಷಣ ನಾಲ್ವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಿದ್ದಾರೆ.
ಬಚ್ಚಾನಿಗೆ ಅಷ್ಟೇನೂ ಸಮಸ್ಯೆಯಾಗದ ಕಾರಣ ಆತನನ್ನು ರಾತ್ರಿಯೇ ಜೈಲ್ಗೆ ವಾಪಸ್ ಕಳುಹಿಸಿದ್ದಾರೆ. ಉಳಿದಂತೆ ನಾಸೀರ್, ಶೋಯಬ್ ಹಾಗು ಇಮ್ರಾನ್ ಅವರಿಗೆ ಮೆಗ್ಗಾನ್ ಆಸ್ಪತ್ರೆಯ ಜೈಲ್ ವಾರ್ಡ್ನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಎಸ್ಪಿ ಲಕ್ಷ್ಮೀ ಪ್ರಸಾದ್ ತಿಳಿಸಿದ್ದಾರೆ.
ಬಚ್ಚಾನಿಂದಾಗಿ ಮೂವರು ಡಿಎಆರ್ ಪೊಲೀಸರು ಅಮಾನತು.. ಬಚ್ಚಾ ವಿಷ ಕುಡಿಯುವ ಒಂದೆರಡು ದಿನ ಮುನ್ನಾ ಜೈಲಿನಿಂದಲೇ ಶಿವಮೊಗ್ಗ ನಗರದ ಉದ್ಯಮಿಯೊಬ್ಬರಿಗೆ ಫೋನ್ನಲ್ಲಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ಸಿಇಎನ್ ಪೊಲೀಸರು ತನಿಖೆಗೆಂದು ಹೋದಾಗ, ಆತನ ಬಳಿ ಮೊಬೈಲ್ ಲಭ್ಯವಾಗುತ್ತಿದ್ದಂತೆಯೇ ಬಚ್ಚಾ ಜೈಲ್ ಸೆಲ್ನಲ್ಲಿ ಹಾಕಿದ್ದ ಟ್ಯೂಬ್ ಲೈಟ್ ಒಡೆದು ಪುಡಿ ಮಾಡಿ ಮೈಗೆ ಹಚ್ಚಿಕೊಂಡಿದ್ದ. ಸಣ್ಣ ಪುಟ್ಟ ಗಾಯಳಾಗಿದ್ದರಿಂದ ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆತರಲಾಗಿತ್ತು.
ಚಿಕಿತ್ಸೆ ಮುಗಿದ ನಂತರ ವಾಪಸ್ ಜೈಲ್ಗೆ ಹೋಗುವಾಗ ಬೈಪಾಸ್ ರಸ್ತೆ ಊರುಗಡೂರು ಬಳಿಯ ಶಾಪ್ನ ಮಾಲೀಕನಿಗೆ ಬೆದರಿಕೆ ಹಾಕಿದ್ದಾನೆ. ಹೀಗೆ ಬೆದರಿಕೆ ಹಾಕುವುದಕ್ಕೆ ಡಿ ಎ ಆರ್ ಪೊಲೀಸರು ಸಹಾಯ ಮಾಡಿದ್ದಾರೆ ಎಂದು ಎಎಸ್ಐ ಮಂಜುನಾಥ್, ಕಾನ್ಸ್ಟೇಬಲ್ಗಳಾದ ಅಶೋಕ್ ಹಾಗೂ ಬೀರೇಶ್ ಅವರನ್ನು ಎಸ್ಪಿ ಲಕ್ಷ್ಮೀ ಪ್ರಸಾದ್ ಅಮಾನತು ಮಾಡಿದ್ದಾರೆ. ಉಳಿದಂತೆ ಡ್ರೈವರ್ ಬಗ್ಗೆ ಪೊಲೀಸ್ ಇಲಾಖೆಯಿಂದ ತನಿಖೆ ನಡೆಸಲಾಗುತ್ತದೆ.
ಕೋಕಾ ಕೇಸ್ನಲ್ಲಿ ಗಡಿಪಾರು ಆಗಿದ್ದ ಬಚ್ಚಾ.. ಬಚ್ಚಾ ಫೋನ್ನಲ್ಲಿ ಧಮ್ಕಿ ಹಾಕುವುದು, ಬೆದರಿಸುವುದು ಸೇರಿದಂತೆ ಸುಮಾರು 40 ಕೇಸ್ಗಳಲ್ಲಿ ಭಾಗಿಯಾಗಿದ್ದಾನೆ. ಈತನ ಮೇಲೆ 2018 ರಲ್ಲಿ ಕೋಕಾ ಕೇಸ್ ಹಾಕಿ ಗಡಿಪಾರು ಮಾಡಲಾಗಿತ್ತು. ನಂತರ ಈತ ದಾವಣಗೆರೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರಿನಲ್ಲಿ ತೆರಳುತ್ತಿದ್ದ ದಂಪತಿಯನ್ನು ಅಡ್ಡಗಟ್ಟಿ ಅವರಿಂದ ಬಂಗಾರದ ಆಭರಣಗಳನ್ನು ಕಿತ್ತು ಪರಾರಿಯಾಗಿದ್ದ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಅಲ್ಲದೆ, ಶಿವಮೊಗ್ಗದ ಉದ್ಯಮಿಗಳಿಗೆ ಬೆದರಿಕೆ ಹಾಕಿದ್ದ ಹಾಗೂ ಬೆಂಗಳೂರಿನಲ್ಲೂ ದರೋಡೆ ನಡೆಸಿದ್ದ. ಕೋಕಾ ಕೇಸ್ನಲ್ಲಿ ಜಾಮೀನು ಪಡೆದು ಮುಂಬೈನಲ್ಲಿ ಅಡಗಿಕೊಂಡಿದ್ದಾಗ ಶಿವಮೊಗ್ಗ ಗ್ರಾಮಾಂತರ ಪಿಐ ಹಾಗೂ ತಂಡ ಆತನನ್ನು ಬಂಧಿಸಿ ಶಿವಮೊಗ್ಗಕ್ಕೆ ಕರೆತಂದಿದ್ದು, ವಿಚಾರಣೆ ಬಳಿಕ ಜೈಲಿಗೆ ಕಳುಹಿಸಲಾಗಿತ್ತು.
ರೌಡಿ ಶೀಟರ್ ಬಚ್ಚಾ ತಾನೊಬ್ಬ ದೊಡ್ಡ ರೌಡಿಯಾಗಬೇಕೆಂಬ ಹಂಬಲದಿಂದ ಹೀಗೆ ಫೋನ್ ಮಾಡಿ ಬೆದರಿಸುವುದು ಸೇರಿದಂತೆ ಇತರೆ ದುಷ್ಕೃತ್ಯಗಳಿಗೆ ಕೈ ಹಾಕುತ್ತಿದ್ದಾನೆ. ಅಲ್ಲದೆ, ಜೈಲ್ನಲ್ಲಿನ ಸಿಬ್ಬಂದಿಯನ್ನು ಬೆದರಿಸಿಕೊಂಡು ಇರಲು ಹೀಗೆ ವರ್ತಿಸುತ್ತಿದ್ದಾನೆ ಎನ್ನಲಾಗುತ್ತಿದೆ.
ಶಿವಮೊಗ್ಗದ ಸೆಂಟ್ರಲ್ ಜೈಲ್ನ ಹಿಂಬದಿಯಿಂದ ಮೊಬೈಲ್ ಅನ್ನು ಎಸೆದಿರುವ ಸಾಧ್ಯತೆ ಇದೆ. ಈ ಕುರಿತು ಸಹ ತನಿಖೆ ನಡೆಸಲಾಗುತ್ತಿದೆ. ಬಚ್ಚಾ ಬೆಂಗಳೂರು ಜೈಲ್ ಸಿಬ್ಬಂದಿಗೆ ಫೋನ್ ಮಾಡಿ ಬೆದರಿಕೆ ಹಾಕಿದ ಬಗ್ಗೆ ಮಾಹಿತಿ ಇದೆ. ಆದರೆ, ಯಾವುದೇ ದೂರು ದಾಖಲಾಗಿಲ್ಲ. ಆತನನ್ನು ಬೆಂಗಳೂರು ಜೈಲಿಗೆ ಕಳುಹಿಸದೆ ಇಲ್ಲಿನ ಕೇಂದ್ರ ಕಾರಾಗೃಹದಲ್ಲಿಯೇ ಇಟ್ಟು ಪ್ರತ್ಯೇಕ ಸೆಲ್ನಲ್ಲಿ ಜೈಲ್ ಸಿಬ್ಬಂದಿಯ ನಿಗಾದಲ್ಲಿಯೇ ಇರುವಂತೆ ನೋಡಿಕೊಳ್ಳಲು ಕಾರಾಗೃಹ ಸಿಬ್ಬಂದಿಗೆ ಸಹಕಾರ ನೀಡುವುದಾಗಿ ಎಸ್ಪಿ ಲಕ್ಷ್ಮೀ ಪ್ರಸಾದ್ ತಿಳಿಸಿದ್ದಾರೆ.
ಓದಿ: ನಾ ಮನೆಯಲ್ಲಿ ರಾಜಕೀಯ ಮಾಡಲ್ಲ : ಮೇಕೆದಾಟು ಅಭಿವೃದ್ಧಿ ಸಂಬಂಧ ಆನಂದ್ ಸಿಂಗ್ ಜತೆ ಮಾತನಾಡಿದ್ದೇನೆ : ಡಿಕೆಶಿ