ಶಿವಮೊಗ್ಗ: ಸಿಗಂದೂರು ದೇವಾಲಯಕ್ಕೆ ತೆರಳುತ್ತಿದ್ದ ಟೆಂಪೋ ಟ್ಯಾಕ್ಸಿಯೊಂದು ಪಲ್ಟಿಯಾಗಿ ಕಂದಕಕ್ಕೆ ಉರುಳಿದ್ದು, ಓರ್ವ ಮಹಿಳೆ ಸಾವನ್ನಪ್ಪಿರುವ ಘಟನೆ ಸಾಗರ ತಾಲೂಕು ಒಕ್ಕೂಡಿ ಗ್ರಾಮದ ಬಳಿ ನಡೆದಿದೆ. ದುರ್ಘಟನೆಯಲ್ಲಿ ಗೌರಮ್ಮ(40) ಎಂಬ ಮಹಿಳೆ ಸಾವನ್ನಪ್ಪಿದ್ದಾರೆ.
ಕೊಪ್ಪಳ ಜಿಲ್ಲೆ ಕುಷ್ಟಗಿ ಪಟ್ಟಣದ ಕುಟುಂಬವೊಂದು ಟೆಂಪೋ ಟ್ಯಾಕ್ಸಿಯಲ್ಲಿ ಪ್ರವಾಸಕ್ಕೆ ಬಂದಿದ್ದರು. ಸಿಗಂದೂರು ದೇವಾಲಯಕ್ಕೆ ಬರುವ ಒಕ್ಕೂಡಿ ಗ್ರಾಮದ ಬಳಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ವಾಹನ ಕಂದಕಕ್ಕೆ ಬಿದ್ದಿದೆ. ಕಂದಕ ಸುಮಾರು 30 ಅಡಿ ಆಳವಿದ್ದು, ಸ್ಥಳೀಯರ ನೆರವಿನಿಂದ ಆರು ಜನರನ್ನು ರಕ್ಷಿಸಲಾಗಿದೆ.
ಗಾಯಾಳುಗಳನ್ನು ತುಮರಿ ಪ್ರಾಥಮಿಕ ಆರೋಗ್ಯಕ್ಕೆ ಕೇಂದ್ರಕ್ಕೆ ದಾಖಲಿಸಲಾಗಿದೆ. ಈ ಕುರಿತು ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.