ಶಿವಮೊಗ್ಗ: ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ ಪ್ರಸರಣವನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಕಠಿಣ ಕಂಟೈನ್‍ಮೆಂಟ್ ವಲಯಗಳ ರಚನೆ, ಹೋಬಳಿ ಮಟ್ಟಗಳಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭ ಸೇರಿದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಕೋವಿಡ್ ನಿಯಂತ್ರಣದ ಕುರಿತು ಅವರು ಪರಿಶೀಲನಾ ಸಭೆ ನಡೆಸಿದರು.
ಯಾವುದು ಕಂಟೈನ್‍ಮೆಂಟ್ ವಲಯ?
ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಪ್ರಮಾಣ ಏರುಗತಿಯಲ್ಲಿದ್ದು, ಮುಂದಿನ ಒಂದು ವಾರ ಅತ್ಯಂತ ಮಹತ್ವದ್ದಾಗಿದೆ. ಈ ಅವಧಿಯಲ್ಲಿ ಕಟ್ಟುನಿಟ್ಟಾಗಿ ಲಾಕ್‍ಡೌನ್, ಕಂಟೈನ್‍ಮೆಂಟ್ ವಲಯ ನಿರ್ವಹಣೆಯನ್ನು ಕೈಗೊಳ್ಳಬೇಕು. ಗ್ರಾಮೀಣ ಪ್ರದೇಶದಲ್ಲಿ ಒಂದೇ ಪ್ರದೇಶದಲ್ಲಿ ಸತತ ಎರಡು ದಿನ ಐದು ಪಾಸಿಟಿವ್ ಪ್ರಕರಣಗಳು ಪತ್ತೆಯಾದರೆ ಅದನ್ನು ಕಂಟೈನ್‍ಮೆಂಟ್ ವಲಯವೆಂದು ಘೋಷಿಸಿ ಜನರ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಬೇಕು ಎಂದು ಸೂಚಿಸಿದರು.
ಇಲ್ಲಿನ ಜನರ ದಿನಸಿ, ಔಷಧಿ ಇತ್ಯಾದಿ ಅವಶ್ಯಕತೆಗಳನ್ನು ಮನೆ ಬಾಗಿಲಿಗೆ ತಲುಪಿಸಲು ಕ್ರಮ ಕೈಗೊಳ್ಳಬೇಕು. ಸಣ್ಣ ಗ್ರಾಮ ಪಂಚಾಯತಿ ಗಳಾದರೆ ಇಡೀ ಗ್ರಾಮ ಪಂಚಾಯತಿ ಕಂಟೈನ್‍ಮೆಂಟ್ ವಲಯವೆಂದು ಪರಿಗಣಿಸಬೇಕು. ಕೊರೊನಾ ಪೀಡಿತರ ಮನೆಗೆ ಆಶಾ ಕಾರ್ಯಕರ್ತೆಯರು ಪ್ರತಿ ದಿನ ಭೇಟಿ ನೀಡಿ ಆರೋಗ್ಯದ ಕುರಿತು ಮಾತ್ರವಲ್ಲದೆ ಇನ್ನಿತರ ಅಗತ್ಯ ವಸ್ತುಗಳ ಕುರಿತಾಗಿಯೂ ಮಾಹಿತಿಯನ್ನು ಪಡೆದುಕೊಂಡು ಇನ್ಸಿಡೆಂಟ್ ಕಮಾಂಡರ್ ಅವರಿಗೆ ತಲುಪಿಸಬೇಕು. ರೋಗಿಗಳ ಆರೋಗ್ಯ ತಪಾಸಣೆಗೆ ಆಯುಷ್ ವೈದ್ಯರ ಸೇವೆಯನ್ನು ಪಡೆಯಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಪ್ರತಿ ಕಂಟೈನ್‍ಮೆಂಟ್ ಪ್ರದೇಶದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗುವುದು. ಮುಂದಿನ ದಿನಗಳಲ್ಲಿ ಗ್ರಾಮೀಣ ಟಾಸ್ಕ್ ಪೋರ್ಸ್ ಕಾರ್ಯ ಮಹತ್ವದ್ದಾಗಿದ್ದು, ತಮ್ಮ ಪ್ರದೇಶದಲ್ಲಿ ದಿನದ 24ಗಂಟೆ ಕಟ್ಟೆಚ್ಚರದಿಂದಿದ್ದು, ಕರ್ತವ್ಯ ನಿರ್ವಹಿಸಬೇಕು ಎಂದು ಎಸ್ಪಿ ಲಕ್ಷ್ಮೀಪ್ರಸಾದ್ ತಿಳಿಸಿದರು.
ಹೋಬಳಿ ಮಟ್ಟದಲ್ಲಿ ಅಗತ್ಯವಿರುವ ಕಡೆಗಳಲ್ಲಿ ಕೋವಿಡ್ ಕೇರ್ ಸೆಂಟರ್‍ಗಳನ್ನು ಆರಂಭಿಸಲು ಈಗಾಗಲೇ ತಹಶೀಲ್ದಾರ್ಗಳಿಗೆ ಸೂಚನೆ ನೀಡಲಾಗಿದೆ. ಹೋಂ ಐಸೋಲೇಷನ್‍ಗೆ ಅವಕಾಶ ನೀಡದೆ ಆದಷ್ಟು, ಈ ಕೇಂದ್ರಗಳಲ್ಲಿ ಕೆಲವು ದಿನಗಳ ಮಟ್ಟಿಗೆ ಆರೈಕೆ ಮಾಡಬೇಕು. ಯಾವುದೇ ಕಾರಣಕ್ಕೂ ತಾಲೂಕು ಹಾಗೂ ಗ್ರಾಮಾಂತರ ಪ್ರದೇಶಗಳಿಂದ ನೇರವಾಗಿ ಕೋವಿಡ್ ಪೀಡಿತರು ನೇರವಾಗಿ ಮೆಗ್ಗಾನ್‍ಗೆ ಬರಬಾದರು. ತಾಲೂಕು ಕೇಂದ್ರದಲ್ಲಿ ಪರಿಶೀಲಿಸಿದ ಬಳಿಕ ಅಲ್ಲಿಂದ ಕಡ್ಡಾಯವಾಗಿ ಅಂಬುಲೆನ್ಸ್ ಮೂಲಕ ಅಗತ್ಯವಿದ್ದರೆ ಮೆಗ್ಗಾನ್‍ಗೆ ಕಳುಹಿಸಬೇಕು. ಕೋವಿಡ್ ಪೀಡಿತರ ಚಿಕಿತ್ಸೆ ಕುರಿತಾಗಿ ತಾಲೂಕು ಮಟ್ಟದ ಎಲ್ಲಾ ನರ್ಸ್‍ಗಳಿಗೆ, ಡಿ ಗ್ರೂಪ್ ಸಿಬ್ಬಂದಿಗೆ ತಜ್ಞರಿಂದ ತರಬೇತಿಯನ್ನು ಆಯೋಜಿಸಲಾಗುವುದು. ಖಾಸಗಿ ಆಸ್ಪತ್ರೆಗಳು ತಾವು ಕರೋನಾ ಪರೀಕ್ಷೆಗೆ ಹಾಗೂ ಸಿಟಿ ಸ್ಕ್ಯಾನ್‍ಗೆ ಶಿಫಾರಸು ಮಾಡಿರುವವರ ವಿವರಗಳನ್ನು ನಿಗದಿತ ನಮೂನೆಯಲ್ಲಿ ಸಲ್ಲಿಸಬೇಕು ಎಂದು ಹೇಳಿದರು.
ಪ್ರಾಥಮಿಕ ಸಂಪರ್ಕಿತರು ಕಡ್ಡಾಯವಾಗಿ ಹೋಂ ಐಸೋಲೇಷನ್‍ನಲ್ಲಿರುವುದನ್ನು ಖಾತ್ರಿಪಡಿಸಬೇಕು. ನ್ಯಾಯಬೆಲೆ ಅಂಗಡಿಗಳ ಮುಂದೆ ಜನಸಂದಣಿಯಾಗದಂತೆ ಕ್ರಮ ಕೈಗೊಳ್ಳಬೇಕು. ತಾಲೂಕು ಆಸ್ಪತ್ರೆಗಳಲ್ಲಿ ಲಭ್ಯವಿರುವ ಆಕ್ಸಿಜನ್ ಬಗ್ಗೆ ಪ್ರತಿದಿನ ನಿಗದಿತ ನಮೂನೆಯಲ್ಲಿ ಮಾಹಿತಿ ನೀಡಬೇಕು ಎಂದರು.
ಮೇ 24 ರವರೆಗೆ ಆನವಟ್ಟಿ ಸಂಪೂರ್ಣ ಬಂದ್:
ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗಿರುವ ಕಾರಣ ಇತ್ತೀಚೆಗಷ್ಟೆ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೆ ಏರಿಕೆ ಕಂಡ ಸೊರಬ ತಾಲೂಕಿನ ಆನವಟ್ಟಿಯಲ್ಲಿ ಮೇ 24 ರ ತನಕ ಸಂಪೂರ್ಣ ಲಾಕ್ ಡೌನ್ ಮಾಡಲಾಗಿದೆ. ಆನವಟ್ಟಿಯಲ್ಲಿ ಆರು ಪ್ರದೇಶಗಳಿಗೆ ಕಂಟೈನ್ಮೆಂಟ್ ಝೋನ್ ಘೋಷಣೆ ಮಾಡಲಾಗಿದೆ. ಆನವಟ್ಟಿಯಲ್ಲಿಯೇ 151 ಸಕ್ರೀಯ ಕೊರೂನಾ ಪಾಸಿಟಿವ್ ಪ್ರಕರಣಗಳು ಕಂಡುಬಂದಿವೆ. ಇಲ್ಲಿ ಇದುವರೆಗೂ 15 ಜನ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಒಂದೆ ಬಡಾವಣೆ, ಒಂದೇ ಕುಟುಂಬ ಅಥವಾ ನೆರೆಹೊರೆಯದಲ್ಲಿ 5 ಕ್ಕಿಂತ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಬಡಾವಣೆಗಳನ್ನು ಮೈಕ್ರೋ ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಲಾಗಿದ್ದು, ಸಾರ್ವಜನಿಕರ ಪ್ರವೇಶ ಮತ್ತು ಸಂಚಾರವನ್ನು ನಿಷೇಧಿಸಲಾಗಿದೆ.
ಹೆಚ್ಚು ಕೊರೊನಾ ಸೋಂಕು ಕಾಣಿಸಿಕೊಂಡ ದೇವಸ್ಥಾನದ ಹಕ್ಕಲು, ಸಂತೆ ಮೈದಾನ, ನೆಹರೂ ನಗರ, ಜೆ.ಸಿ. ಬಡಾವಣೆ, ಬ್ರಾಹ್ಮಣ ಬೀದಿ, ತಿಮ್ಮಾಪುರ ಬಡಾವಣೆಗಳು ಮೈಕ್ರೋ ಕಂಟೈನ್ಮೆಂಟ್ ಝೋನ್ ಪ್ರದೇಶಗಳಾಗಿವೆ. ಈ ಪ್ರದೇಶಗಳಲ್ಲಿ ಮತ್ತು ಜನ ಹೆಚ್ಚು ಸೇರುವ ಪ್ರದೇಶಗಳಲ್ಲಿ ಪಟ್ಟಣ ಪಂಚಾಯತಿ ವತಿಯಿಂದ ಸ್ಯಾನಿಟೈಸ್ ಮಾಡಿಸಲಾಗಿದೆ. ಇಂದಿನಿಂದ ಮುಂದಿನ ಐದು ದಿನಗಳವರೆಗೆ ಕಠಿಣ ನಿರ್ಬಂಧ ಜಾರಿ ಮಾಡಲಾಗಿದೆ. ಸಾರ್ವಜನಿಕರ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಧಿಕೃತವಾದ ಡೈರಿಗಳಲ್ಲಿ ಹಾಲು ಮಾರಲು ಸಂಜೆ 6 ರವರೆಗೆ ಅವಕಾಶವಿದೆ. ಬೆಳಗ್ಗೆ 10 ರವರೆಗೆ ತರಕಾರಿಗಳನ್ನು ತಳ್ಳುವ ಗಾಡಿ ಅಥವಾ ಹೊತ್ತು ಮಾರಲು ಅವಕಾಶ ನೀಡಲಾಗಿದೆ. ತುರ್ತು ಅಗತ್ಯ ಸೇವೆಯಾದ ಔಷಧದ ಅಂಗಡಿಗಳಿಗೆ ರಾತ್ರಿ 10 ರವರೆಗೆ ತೆರೆಯಲು ಅವಕಾಶ ನೀಡಲಾಗಿದೆ. ಪೊಲೀಸ್ ಇಲಾಖೆಯಿಂದ ಅನಗತ್ಯ ತಿರುಗುವವರಿಗೂ ಸಹ ಕಡಿವಾಣ ಹಾಕಲಾಗಿದೆ.