ಶಿವಮೊಗ್ಗ : ಕೇಂದ್ರ ಸರ್ಕಾರ ಜಾರಿಗೆ ತರಲಿರುವ ಕೃಷಿ ಮಾರುಕಟ್ಟೆ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರೈತರು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ರಾಜ್ಯಪಾಲರ ಮುಂದಿರುವ ತಿದ್ದುಪಡಿ ಕಡಿತವನ್ನು ವಾಪಸ್ ಪಡೆದು, ರೈತರಿಗೆ ಮರಣಶಾಸನವಾಗಿರುವ ಎಪಿಎಂಸಿ ಕಾಯ್ದೆಯನ್ನು ಹಿಂಪಡೆಯಬೇಕು. ಕಾಯ್ದೆ ತಿದ್ದುಪಡಿಯಾದರೆ ಯಾವುದೇ ಖರೀದಿದಾರ ರಾಜ್ಯದಲ್ಲಿ ಎಲ್ಲಿ ಬೇಕಾದರೂ ಖರೀದಿ ಮಾಡಬಹುದು. ಅವರಿಗೆ ಈ ಮಾರುಕಟ್ಟೆಯ ಕಾಯ್ದೆಗಳು ಅನ್ವಯಿಸುವುದಿಲ್ಲ. ಖಾಸಗಿ ಮಾರುಕಟ್ಟೆಗಳನ್ನು ನಿರ್ಮಿಸಿಕೊಳ್ಳಬಹುದಾಗಿದೆ. ಈ ಕಾಯ್ದೆಯಿಂದ ಸರ್ಕಾರಗಳಿಗೆ ತೆರಿಗೆ ತುಂಬಬೇಕಾಗಿಲ್ಲ. ಅಷ್ಟೇ ಅಲ್ಲದೆ ರೈತರಿಂದ ಪ್ರತಿನಿಧಿಸಲ್ಪಡುವ ಎಪಿಎಂಸಿಗಳು ನಶಿಸಿ ಹೋಗುತ್ತವೆ. ಹಾಗಾಗಿ ಈ ಕಾಯ್ದೆಯನ್ನು ರಾಜ್ಯ ಸರ್ಕಾರ ತಿರಸ್ಕರಿಸಬೇಕು ಎಂದು ಒತ್ತಾಯಿಸಿದರು.
ಸದನಲ್ಲಿ ಸಾಧಕ, ಬಾಧಕಗಳು ಚರ್ಚೆ ಆಗದೆ ಕಾಯ್ದೆಯನ್ನು ಜಾರಿಗೆ ತರಲು ಸುಗ್ರೀವಾಜ್ಞೆ ಹೊರಡಿಸಿರುವುದು ಸರಿ ಅಲ್ಲ. ಹಾಗಾಗಿ ರೈತ ಪರ ಚಿಂತನೆ ಇರುವ ಮುಖ್ಯಮಂತ್ರಿಗಳು ಈ ಕಾಯ್ದೆಯನ್ನು ವಿರೋಧಿಸಬೇಕು ಎಂದು ರೈತರು ಮನವಿ ಮಾಡಿದರು.