ಶಿವಮೊಗ್ಗ: ಮಹಿಳೆ ಮೇಲೆ ಅತ್ಯಾಚಾರ ನಡೆಸಿದ್ದ ಅಪರಾಧಿಗೆ ಸಾಗರದ ನ್ಯಾಯಾಲಯವು 10 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 60 ಸಾವಿರ ರೂ ದಂಡ ವಿಧಿಸಿ ಆದೇಶ ಹೊರಡಿಸಿದೆ.
2017ರಲ್ಲಿ ಸಾಗರದ ನಿವಾಸಿ ಅನಿಲ್ ಡಿಸೋಜಾ ಎಂಬಾತ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದ. ಸಾಗರ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಅನಿಲ್ ಹೋಟೆಲ್ ಮಾಲೀಕ ರಾತ್ರಿ ಕೆಲಸಕ್ಕೆ ಕರೆದಿದ್ದಾರೆ ಎಂದು ಆಟೋದಲ್ಲಿ ಕರೆದುಕೊಂಡು ಹೋಗಿ ಆಕೆಯ ಮೇಲೆ ದುಷ್ಕೃತ್ಯ ಮೆರೆದಿದ್ದ. ಬಳಿಕ ಈ ವಿಚಾರ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದ.
ಆದರೆ ಮಹಿಳೆ ಅನಾರೋಗ್ಯ ಎಂದು ಆಸ್ಪತ್ರೆಗೆ ಹೋದಾಗ ಗರ್ಭಿಣಿಯಾಗಿರುವುದು ತಿಳಿದು ಬಂದಿತ್ತು. ನಂತರ ಆಕೆಯು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಅಂದಿನ ಸಾಗರದ ಗ್ರಾಮಾಂತರ ಸಿಪಿಐ ಅವರು ದೂರು ದಾಖಲಿಸಿಕೊಂಡು ದೋಷಾರೋಪಣೆಯನ್ನು ಕೋರ್ಟ್ ಗೆ ಸಲ್ಲಿಸಿದ್ದರು.
ಪ್ರಕರಣದ ವಾದ-ಪ್ರತಿವಾದ ಅಲಿಸಿದ ಜಿಲ್ಲಾ ಐದನೇ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮಹಾಂತಪ್ಪನವರು ಸಾಕ್ಷಿಗಳ ಆಧಾರದ ಮೇಲೆ ಅಪರಾಧಿಗೆ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 60 ಸಾವಿರ ರೂ ದಂಡ ವಿಧಿಸಿದ್ದಾರೆ. ಒಂದು ವೇಳೆ ಹಣ ಪಾವತಿಸಲು ಆಗದಿದ್ದರೆ, 2 ವರ್ಷ ಶಿಕ್ಷೆ ಅನುಭವಿಸಬೇಕು ಹಾಗೂ ನೊಂದ ಮಹಿಳೆಗೆ 50 ಸಾವಿರ ರೂ. ನೀಡಬೇಕೆಂದು ಆದೇಶ ನೀಡಿದ್ದಾರೆ. ಈ ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕರಾದ ಅಣ್ಣಪ್ಪ ನಾಯ್ಕ್ ವಾದ ಮಂಡಿಸಿದ್ದರು.
ಇದನ್ನೂ ಓದಿ: ದೇವಾಲಯಕ್ಕೆ ಹೊರಟ ಆಟೋಗೆ ಲಾರಿ ಡಿಕ್ಕಿ: ನದಿಗೆ ಬಿದ್ದು ಬಾಲಕಿ ಸಾವು, ಐವರು ಕಣ್ಮರೆ