ಶಿವಮೊಗ್ಗ: ಮಂಗಳೂರಿನ ಹಿಂಸಾಚಾರಗಳು ನಿಲ್ಲಬೇಕಾದರೆ ಸೂತ್ರಧಾರರನ್ನ ಬಂಧಿಸಬೇಕು. ದಕ್ಷಿಣ ಕನ್ನಡ ಜಿಲ್ಲೆಯವರಿಗೆ ಯಾರೂ ಗೌರವ ನೀಡದಂತಾಗಿದೆ ಎಂದು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ರಮಾನಾಥ್ ರೈ ಹೇಳಿದ್ದಾರೆ.
ಇಂದು ಶಿವಮೊಗ್ಗ ಸರ್ಕ್ಯೂಟ್ ಹೌಸ್ಗೆ ಆಗಮಿಸಿದ ರೈ, ಕರಾವಳಿ ಹತ್ಯೆಗಳ ಬಗ್ಗೆ ಬೇಸರ ವ್ಯಕ್ತಪಡಿಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನೇಕ ಧರ್ಮಾಧಾರಿತ ಹತ್ಯೆಗಳಾಗಿವೆ. ಈ ಎಲ್ಲಾ ಹತ್ಯೆಗಳಿಗೆ ಬಿಜೆಪಿ ಅಧೀನ ಸಂಘಟನೆ, ಪಿಎಫ್ಐ ಸಂಘಟನೆಗಳೇ ಕಾರಣ. ಕಾಂಗ್ರೆಸ್ಲ್ಲಿ ಎಲ್ಲಾ ಜಾತಿ ಧರ್ಮೀಯರಿದ್ದಾರೆ. ಪೊಲೀಸ್ ಎಫ್ಐಆರ್ಲ್ಲಿ ಒಬ್ಬೇ ಒಬ್ಬ ಕಾಂಗ್ರೆಸ್ ನಾಯಕನ ಹೆಸರಿಲ್ಲ. ಬಿಜೆಪಿ ಹಾಗೂ ಎಸ್ಡಿಪಿಐ ಕಾರ್ಯಕರ್ತರು ಮಾತ್ರ ಇದ್ದಾರೆ. ಬಿಜೆಪಿ ಪ್ರೇರಿತ ಸಂಘಟನೆಗಳ ಈ ಕೃತ್ಯಗಳ ಬಗ್ಗೆ ಮಾಹಿತಿ ಹಕ್ಕಿನಡಿ ಅರ್ಜಿ ಹಾಕಿದರೆ ಸಂಪೂರ್ಣ ವಿವರ ಸಿಗುತ್ತದೆ ಎಂದು ಅವರು ಹೇಳಿದರು.
ದ.ಕ ಜಿಲ್ಲೆಯಲ್ಲಿ ವಾರದೊಳಗೆ ಮೂರು ಹತ್ಯೆಗಳಾಗುತ್ತೆ ಎಂದರೆ ಸರ್ಕಾರದ ಇಂಟೆಲಿಜೆನ್ಸ್ ಸಂಪೂರ್ಣ ವಿಫಲವಾಗಿದೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಸಿಎಂ ಬಸವರಾಜ ಬೊಮ್ಮಾಯಿ ತಾರತಮ್ಯ ಮಾಡಿ ಸಂತ್ರಸ್ತರ ಮನೆಗಳಿಗೆ ಭೇಟಿ ನೀಡಿದರು. ಎಲ್ಲಾ ವರ್ಗಗಳ ಸಿಎಂ ಒಂದೇ ಕಡೆ ಹೋಗಿ ಬರುವುದು ಸರಿ ಅಲ್ಲ. ಕರಾವಳಿಯಲ್ಲಿ ಹಿಂದುಳಿದ ವರ್ಗದ ಮಕ್ಕಳು ಸಾಯ್ತಾರೆ, ಜೈಲಿಗೆ ಹೋಗ್ತಾರೆ. ಆದರೆ, ಪ್ರಚೋದನಾಕಾರಿ ಭಾಷಣ ಮಾಡುವವರು ಹಾಗೇ ಉಳಿಯುತ್ತಿದ್ದಾರೆ. ಮೊದಲು ಅಂಥವರನ್ನ ಬಂಧಿಸಬೇಕು. ಟಿಪ್ಪು ಸುಲ್ತಾನ್ ಜಯಂತಿ ಸಮಯ ಯಾರಾದರೂ ಒಬ್ಬ ಸಾಯಲೇಬೇಕು ಎಂಬುದು ವಾಡಿಕೆ ಎಂದು ರೈ ಹರಿಹಾಯ್ದರು.
ಇದನ್ನೂ ಓದಿ: ಒಂದು ತಿಂಗಳೊಳಗಾಗಿ ರೈತರಿಗೆ ಬೆಳೆ ಹಾನಿ ಪರಿಹಾರ ಪಾವತಿ : ಸಚಿವ ಆರ್ ಅಶೋಕ್