ಶಿವಮೊಗ್ಗ: ಜಿಲ್ಲೆಯಲ್ಲಿ ಕಳೆದ ರಾತ್ರಿಯಿಂದ ಮಳೆಯ ಪ್ರಮಾಣ ಕಡಿಮೆಯಾಗಿದೆ. ಇದರಿಂದ ನದಿ, ಹಳ್ಳಗಳಲ್ಲಿನ ಅಪಾಯ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ.
ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆ ಜಿಲ್ಲೆಯನ್ನು ರೆಡ್ ಝೋನ್ಗೆ ಸೇರಿಸಿ, ಜಿಲ್ಲಾದ್ಯಂತ ನದಿ-ಹಳ್ಳಗಳ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಅಲ್ಲದೆ, ಕಳೆದ ಬಾರಿ ಎಲ್ಲೆಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿತ್ತೋ ಅಲ್ಲೆಲ್ಲ ಇದೀಗ ಕಾಳಜಿ ಕೇಂದ್ರ ಸ್ಥಾಪನೆ ಮಾಡಲಾಗಿದೆ. ಇದರಿಂದ ಸ್ಥಳೀಯರ ಆಂತಕ ಸ್ವಲ್ಪ ಕಡಿಮೆಯಾಗಿದೆ. ಒಂದು ವೇಳೆ ತುರ್ತು ಪ್ರವಾಹ ಬಂದರೆ ರಕ್ಷಣಾ ತಂಡಗಳು ಸಹ ಆಗಮಿಸಿವೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಮೂಲಗಳು ತಿಳಿಸಿವೆ.
ಇನ್ನು ವರದಾ ನದಿಯಿಂದ ಸಾಗರದ ತಾಳಗುಪ್ಪ ಹೋಬಳಿಯ ಬಿಸನಗದ್ದೆ ಗ್ರಾಮದ ನೂರಾರು ಎಕರೆ ಭೂಮಿ ಜಲಾವೃತಗೊಂಡಿದೆ. ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಕೃಷಿ ಕೂಲಿ ಕಾರ್ಮಿಕರಿಗೆ ಬೇಡಿಕೆ ಹೆಚ್ಚಾಗಿದೆ. ಭದ್ರಾ ಅಣೆಕಟ್ಟೆಗೆ ಒಂದೇ ದಿನ 3 ಅಡಿ ನೀರು ಬಂದಿದ್ದು, ಒಳ ಹರಿವು 47.236 ಕ್ಯೂಸೆಕ್ ಇದೆ.